ಬೆಂಗಳೂರು,ಏ.10- ಇದೇ 19ರಂದು ಇತಿಹಾಸ ಪ್ರಸಿದ್ಧ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ನಾಳೆಯಿಂದ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿನಾಳೆಯಿಂದ ಏ.21ರವರೆಗೂ ಸ್ನಾನಘಟ್ಟದ ಪೂಜೆಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಮಹಾಮಂಗಳಾರತಿ ನೆರವೇರಲಿವೆ.
ಈ ಬಾರಿ ಕರಗ ಹೊರಲಿರುವ ಎನ್.ಮನು ಅವರು ಈಗಾಗಲೇ ಸಕಲ ವಿಧಿವಿಧಾನಗಳನ್ನು ಪೂರೈಸಿದ್ದು, ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಬೀಡುಬಿಟ್ಟಿದ್ದಾರೆ.
ನಾಳೆ ರಾತ್ರಿ 10 ಗಂಟೆಗೆ ರಥೋತ್ಸವದ ಮೂಲಕ ಕರಗಕ್ಕೆ ಚಾಲನೆ ದೊರೆಯಲಿದೆ.ಬೆಳಗಿನ ಜಾವ 4 ಗಂಟೆಗೆ ಧ್ವಜಾರೋಹಣ ನಡೆಯಲಿದೆ.
ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕಬ್ಬನ್‍ಪಾರ್ಕ್‍ನಲ್ಲಿರುವ ಕರಗದ ಕುಂಟೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಶನಿವಾರ ಸಂಪಂಗಿ ಕೆರೆಯ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಭಾನುವಾರ ಹೂವಿನ ತೋಟ, ಲಾಲ್‍ಬಾಗ್ ರಸ್ತೆಯಲ್ಲಿರುವ ಮುನೇಶ್ವರಸ್ವಾಮಿ ದೇವಾಲಯ, 15ರಂದು ಗವಿಪುರ ಗುಟ್ಟಹಳ್ಳಿಯ ಜಲಕಂಠೇಶ್ವರ ಸ್ವಾಮಿ ದೇವಾಲಯ, 16ರಂದು ಅಣ್ಣಮ್ಮ ದೇವಾಲಯ, 17ರಂದು ಕರಗದ ಕುಂಟೆ, 18ರಂದು ಕಲಾಸಿಪಾಳ್ಯದ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆ ನಡೆಯಲಿದೆ.
19ರಂದು ಬೆಳಗ್ಗೆ 9 ಗಂಟೆಗೆ ಕಬ್ಬನ್‍ಪಾರ್ಕ್‍ನಲ್ಲಿರುವ ಕರಗದ ಕುಂಟೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕರಗದ ಪೂಜಾರಿ ಮನು ಅವರು ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ರಾತ್ರಿ 12 ಗಂಟೆಗೆ ಸರಿಯಾಗಿ ಕರಗ ಹೊರಲಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮರುದಿನ ಮುಂಜಾನೆ ವಾಪಸ್ಸಾಗುವ ಕರಗಕ್ಕೆ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಗಾವುಶಾಂತಿ ಮಾಡಲಾಗುವುದು.
21ರ ಸಂಜೆ 4ಗಂಟೆಗೆ ವಸಂತೋತ್ಸವ, ರಾತ್ರಿ 10 ಗಂಟೆಗೆ ದೇವತಾ ಉತ್ಸವ ಹಾಗೂ ರಾತ್ರಿ 12 ಗಂಟೆಗೆ ಧ್ವಜಾವರೋಹಣದ ಮೂಲಕ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.
ಎಲ್ಲೆಲ್ಲಿ ಸಾಗಲಿದೆ ಕರಗ:
19ರಂದು ರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡಲಿರುವ ಕರಗ ಅಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀರಾಮ ದೇವಾಲಯ, ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಸಿದ್ದಣ್ಣಗಲ್ಲಿ ಭೆರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್‍ಪೇಟೆಯಲ್ಲಿರುವ ಶ್ರೀರಾಮ ಸೇವಾ ಮಂದಿರ ಗಲ್ಲಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ ಮಕ್ಕಳ ಬಸವಣ್ಣಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಸ್ಥಾನ, ಅವಿನ್ಯೂರಸ್ತೆಯ ಈಶ್ವರ ದೇವಾಲಯಕ್ಕೆ ಆಗಮಿಸಲಿದೆ.
ನಂತರ ದೊಡ್ಡಪೇಟೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಾಲಯ, ಕೆ.ಆರ್.ಮಾರುಕಟ್ಟೆಯ ಉದ್ಭವಗಣಪತಿ ದೇವಾಲಯದ ಮೂಲಕ ಮುರಹರಿಸ್ವಾಮಿ ಮಠ ,ಬೀರೇದೇವರಗುಡಿ ಮಾರ್ಗವಾಗಿ ಅರಳೆಪೇಟೆಯ ಮಸ್ತಾನ್‍ಸಾಹೇಬರ ದರ್ಗದಲ್ಲಿ ಪೂಜೆ ಸಲ್ಲಿಸಲಿದೆ.
ಬಳಿಕ ಬಳೇಪೇಟೆ, ಬಳೆಗರಡಿ,ಅಣ್ಣಮ್ಮ ದೇವಾಲಯಗಳನ್ನು ಸಂಧಿಸಿ ಕಿಲಾರಿ ರಸ್ತೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಅವಿನ್ಯೂ ರಸ್ತೆ ಮೂಲಕ ತುಪ್ಪದಾಂಜನೇಯಸ್ವಾಮಿ ಗುಡಿ, ಶ್ರೀ ರಂಗನಾಥಸ್ವಾಮಿ, ಚೌಡೇಶ್ವರಿ ಗುಡಿಯಲ್ಲಿ ಪೂಜೆ ಸ್ವೀಕರಿಸಿ ಕುಂಬಾರಪೇಟೆ ಮುಖ್ಯರಸ್ತೆ ಮೂಲಕ ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಸ್ವೀಕರಿಸಿ ಹಾಲುಬೀದಿ ಕಬ್ಬನ್‍ಪೇಟೆ ಮೂಲಕ ಸುಣ್ಣಕಲ್‍ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜಾದಿಗಳನ್ನು ಸ್ವೀಕರಿಸಿ ನರಸಿಂಹ ಜೋಯಿಸ್‍ಗಲ್ಲಿ ಮೂಲಕ ಹಾದು ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಾಲಯಕ್ಕೆ ಕರಗ ವಾಪಸ್ಸಾಗಲಿದೆ.
ಬಿಡಿ ಮಲ್ಲಿಗೆ ಎರಚಿ:
ಕರಗ ಸಂಚರಿಸುವ ಮುಖ್ಯರಸ್ತೆಗಳಲ್ಲಿ ಮಾತ್ರವೇ ಪೂಜೆ ಸ್ವೀಕರಿಸಲಾಗುವುದು.ಯಾವುದೇ ಗಲ್ಲಿಗಳಿಗೆ ಆಗಮಿಸುವುದಿಲ್ಲ. ಭಕ್ತಾಧಿಗಳು ಮುಖ್ಯರಸ್ತೆಗಳಲ್ಲೇ ಪೂಜೆ ಸಲ್ಲಿಸಬೇಕು. ಕರಗದ ಮೇಲೆ ಬಿಡಿ ಮಲ್ಲಿಗೆ ಹೂವನ್ನು ಮಾತ್ರ ಎರಚಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ರಾಜಗೋಪಾಲ್ ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ:
ಏ.16ರಂದು ಆರತಿ ದೀಪೋತ್ಸವ ನೆರವೇರಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಾಲಯದಲ್ಲಿ ದೀಪಾಲಂಕಾರ ಮಾಡಲು ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಆರತಿ ದೀಪಗಳನ್ನು ದೇವಾಲಯಗಳಲ್ಲಿ ಬೆಳಗಿಸುವ ಸಂದರ್ಭದಲ್ಲಿ ಮಹಿಳೆಯರು ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯಬೇಕು. ಹಸಿಕರಗ, ಹೂವಿನ ಕರಗದ ದಿನದಂದು ವೀರಕುಮಾರರು ದೇವಾಲಯದ ರೂಢಿ ಪದ್ದತಿಯಂತೆ ಸಮವಸ್ತ್ರ, ಪೇಟಾ ಧರಿಸಿ ಕಡ್ಡಾಯವಾಗಿ ಹಲಗಿನೊಂದಿಗೆ ಬಂದು ದೇವರ ಸೇವೆಯನ್ನು ನೆರವೇರಿಸುವಂತೆ ಕೋರಲಾಗಿದೆ.
ವಿದ್ಯುತ್ ದೀಪಾಲಂಕಾರ:
ನಾಡಪ್ರಭು ಕೆಂಪೇಗೌಡರ ಕಾಲದಿಂದ ನಡೆದುಕೊಂಡು ಬರುತ್ತಿರುವ ಕರಗ ಉತ್ಸವ ಇಂದಿಗೂ ತನ್ನ ಮೆರಗು ಕಳೆದುಕೊಂಡಿಲ್ಲ. ಬೆಂಗಳೂರು ಇಡೀ ವಿಶ್ವದ ಸಿಲಿಕಾನ್ ಸಿಟಿಯಾಗಿ ರೂಪುಗೊಂಡಿದ್ದರೂ ಕರಗ ಉತ್ಸವ ಸಂದರ್ಭದಲ್ಲಿ ಧಾರ್ಮಿಕತೆಯ ತವರೂರಾಗಿ ಪರಿವರ್ತನೆಯಾಗುತ್ತದೆ.
ಉತ್ಸವ ನೆರವೇರುವ ಪ್ರದೇಶಗಳ ಮನೆ, ಮಳಿಗೆಗಳನ್ನು ಸುಣ್ಣಬಣ್ಣಗಳಿಂದ ಸಿಂಗರಿಸಲಾಗುವುದು.ಎಲ್ಲ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿವೆ.
ಕುಣಿದು ಕುಪ್ಪಳಿಸುವ ಚಿಣ್ಣರು:
ಕರಗ ಉತ್ಸವ ನೆರವೇರುವ ದಿನದಂದು ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗ ಜಾತ್ರೆ ನಡೆಯಲಿದೆ. ರಸ್ತೆರಸ್ತೆಗಳಲ್ಲಿ ಅರವಂಟಿಕೆಗಳನ್ನು ಸ್ಥಾಪಿಸಿ ಭಕ್ತರಿಗೆ ಉಚಿತವಾಗಿ ನೀರು, ಮಜ್ಜಿಗೆ, ಪಾನಕ ವಿತರಿಸಲಾಗುವುದು. ಮಕ್ಕಳು ಜಾತ್ರೆಯಲ್ಲಿ ಸಿಗುವ ಆಟಿಕೆಗಳನ್ನು ಕೊಂಡು ಕುಣಿದುಕುಪ್ಪಳಿಸುವುದನ್ನು ನೋಡುವುದೇ ಚೆಂದ.
ಹರಿದುಬರಲಿದೆ ಭಕ್ತ ಸಾಗರ:
ಕರಗ ಉತ್ಸವಕ್ಕೆ ರಾಜ್ಯ, ಹೊರರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಕರಗದ ಮೇಲೆ ಬಿಡಿ ಮಲ್ಲಿಗೆ ಹೂವು ಎಸೆದು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವಿಗೆ ಮನವಿ ಮಾಡಿಕೊಳ್ಳಲಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲದೆ ಹೊರರಾಜ್ಯಗಳಾದ ತಮಿಳುನಾಡು, ಆಂಧ್ರದಿಂದಲೂ ಸಹಸ್ರಾರು ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತಿರುವುದು ಕರಗ ಉತ್ಸವದ ಹೆಗ್ಗಳಿಕೆ.