ಲೋಕಸಭಾ ಸಮರ: ನಾಳೆ ಮೊದಲ ಹಂತಕ್ಕೆ ಮತದಾನ

ನವದೆಹಲಿ, ಏ.10- ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿರುವ ಭಾರತದಲ್ಲಿ ಹೈವೊಲ್ಟೇಜ್ ಲೋಕಸಭಾ ಸಮರದ ಮೊದಲಹಂತಕ್ಕೆ ನಾಳೆ ಮತದಾನ ನಡೆಯಲಿದೆ.

ಇದರೊಂದಿಗೆ ಒಟ್ಟು 7 ಹಂತಗಳ ಲೋಕಸಭಾ ಚುನಾವಣೆಗೆ ಚಾಲನೆ ದೊರೆಯಲಿದ್ದು, ಘಟಾನುಘಟಿಗಳ ಅದೃಷ್ಟ ಪರೀಕ್ಷೆಗೆ ವೇದಿಕೆ ಸಜ್ಜಾಗಿದೆ.

ನಾಳೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 91 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮೊದಲಹಂತದ ಚುನಾವಣೆಗೆ ಆಯೋಗ ಸಕಲ ರೀತಿಯಲ್ಲೂ ಸಿದ್ಧತೆಗಳನ್ನು ಕೈಗೊಂಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಮೊನ್ನೆ ಅಂತ್ಯಗೊಂಡಿತು.ರಾಜಕೀಯ ಮುಖಂಡರು ಎಲ್ಲ 91 ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರಾಂದೋಲನ ಮತ್ತು ಚುನಾವಣಾ ರ್ಯಾಲಿಗಳನ್ನು ನಡೆಸಿ ಮತದಾರರನ್ನು ಓಲೈಸುವ ಅಂತಿಮ ಕಸರತ್ತು ನಡೆಸಿದರು.

ಬಿಜೆಪಿಯ ಸ್ಟಾರ್ ಕ್ಯಾಂಪೆನರ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲಹಂತದ ಚುನಾವಣೆ ನಡೆಯುವ 91 ಕ್ಷೇತ್ರಗಳಲ್ಲಿ ಸುತ್ತಾಡಿ ತಮ್ಮ ಪಕ್ಷಗಳ ಪರ ಬಿರುಸಿನ ಪ್ರಚಾರ ನಡೆಸಿ ಗಮನ ಸೆಳೆದರು.

ಪ್ರಥಮ ಹಂತದ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಮ್ ನಿಭಾಹೇಂಗೆ ಹೆಸರಿನಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಹಾಗೂ ಬಿಜೆಪಿ ಸಂಕಲ್ಪ್ ಪತ್ರ ಚುನಾವಣಾ ಪ್ರಣಾಳಿಕೆಯ ಮೂಲಕ ದೇಶದ ಮತದಾರರನ್ನು ಓಲೈಸಲು ಅನೇಕ ಭರವಸೆ-ಆಶ್ವಾಸೆಗಳ ವಾಗ್ದಾನ ಮಾಡಿವೆ.

ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಆಸ್ಸಾಂ, ಬಿಹಾರ, ಛತ್ತೀಸಗಡ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮೀಜೋರಾಂ, ನಾಗಾಲ್ಯಾಂಡ್,ಓಡಿಸ್ಸಾ, ಸಿಕ್ಕಿಂ, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ,ಉತ್ತರಖಂಡಾ, ಪಶ್ಚಿಮಬಂಗಾಳ, ಲಕ್ಷದ್ವೀಪ ಹಾಗೂ ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೊದಲಹಂತಕ್ಕೆ ಮತದಾನ ನಡೆಯಲಿದ್ದು ಚುನಾವಣಾ ಕಣ ರಂಗೇರಿದೆ.

ನಾಳೆ ಆಂಧ್ರಪ್ರದೇಶ, ಅರುಣಚಲಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.ಮೊದಲ ಹಂತದಲ್ಲಿ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಲಿದೆ.

ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರ, ತೆಲಂಗಾಣದ 17, ಉತ್ತರಖಂಡದ 5, ಅರುಣಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯದ ತಲಾ 2, ಛತ್ತೀಸಗಡ್, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪದ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

80 ಸದಸ್ಯ ಬಲ ಹೊಂದಿರುವ ದೇಶದ ಅತೀದೊಡ್ಡ ರಾಜ್ಯವಾದ ಉತ್ತರಪ್ರದೇಶದ 8 ಕ್ಷೇತ್ರಗಳು, ಬಿಹಾರದ 4, ಪಶ್ಚಿಮ ಬಂಗಾಳದ 2, ಆಸ್ಸಾಂನ 5, ಮಹಾರಾಷ್ಟ್ರದ 7, ಒಡಿಶಾ 4 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ.

ಆಂಧ್ರದಲ್ಲಿ ಹೈವೋಲ್ಟೆಜ್ ಚುನಾವಣೆ: ದಕ್ಷಿಣಭಾರತದ ಮುಖ್ಯ ರಾಜಕೀಯ ಚಟುವಟಿಕೆಗಳ ತಾಣವಾಗಿರುವ ನಾಳೆ ಲೋಕಸಭೆಯೊಂದಿಗೆ ವಿಧಾನಸಭೆಗೂ ಚುನಾವಣೆಯ ನಡೆಯಲಿದ್ದು, ಕದನ ಕೌತುಕ ಕೆರಳಿಸಿದೆ.

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೇಶಂ ಪಾರ್ಟಿ (ಟಿಡಿಪಿ) ಮತ್ತು ವೈ.ಎಸ್.ಜಗನ್‍ಮೋಹನ್ ರೆಡ್ಡಿ ವೈಆರ್‍ಎಸ್ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ತೆಲಂಗಾಣ 17 ಲೋಕಸಭಾ ಕ್ಷೇತ್ರಗಳಿಗೂ ಈ ಹಂತದಲ್ಲಿ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ಪ್ರಾಬಲ್ಯ ಹೊಂದಿದೆ. ಈ ಎರಡು ರಾಜ್ಯಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲವಾಗಿಲ್ಲ.

20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಸಮಯವು ಸ್ವಲ್ಪ ವ್ಯತ್ಯಾಸದಿಂದ ಕೂಡಿರುತ್ತದೆ. ಸುಗಮ, ಶಾಂತಿಯುತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಆಯೋಗ ಬಿರುಸಿನ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.ಮತದಾನದ ವೇಳೆ ಯಾವುದೇ ಅಹಿತಕರಣ ಘಟನೆಗಳು ನಡೆಯದಂತೆ ವ್ಯಾಪಕ್ತ ಬಂದೋಬಸ್ತ್ ಮಾಡಲಾಗುತ್ತಿದೆ.

ಚುನಾವಣಾ ಆಯೋಗ ನಾಳೆಯ ಮೊದಲಹಂತದ ಮತದಾನಕ್ಕಾಗಿ ಸಲಕ ರೀತಿಯಲ್ಲಿ ಸಜ್ಜಾಗಿದ್ದು, ಆಯಾಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಸೂಕ್ತ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗಿವೆ.

ಏ. 18, ಏ. 23, ಏ. 29, ಮೇ 6, ಮೇ 12 ಹಾಗೂ ಮೇ 19ರಂದು ಉಳಿದ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ