ಬೆಂಗಳೂರು,ಏ.10- ಪ್ರತಿ ಚುನಾವಣೆಯಲ್ಲಿ ಮತದಾನದ ವೇಳೆ ಚಕ್ಕರ್ ಹೊಡೆದು ರಜೆಯ ಮಜಾ ಅನುಭವಿಸಲು ಹೊರಡುತ್ತಿದ್ದ ಐಟಿ ಉದ್ಯೋಗಿಗಳಿಗೆ ಈ ಬಾರಿ ಮತದಾನ ಮಾಡದಿದ್ದರೆ ವೇತನಕ್ಕೆ ಕತ್ತರಿ ಬೀಳಲಿದೆ.
ಇದೇ 18 ಮತ್ತು 23ರಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ. ಸಾಮಾನ್ಯವಾಗಿ ಐಟಿ ಉದ್ಯೋಗಿಗಳು ಮತದಾನದ ದಿನ ರಜೆ ಹಾಕಿ ಕುಟುಂಬದವರ ಜೊತೆ ಸಮಯ ಕಳೆಯಲು ಹೊರ ಹೋಗುತ್ತಿದುದ್ದೇ ಹೆಚ್ಚು.
ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಎಷ್ಟೇ ಕ್ರಮ ಕೈಗೊಂಡರೂ ಚುನಾವಣೆಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಟೆಕ್ಕಿಗಳು ವರ್ತಿಸುತ್ತಿದ್ದರು.
ಇದನ್ನು ತಪ್ಪಿಸಲು ಚುನಾವಣಾ ಆಯೋಗ ಈಗಾಗಲೇ ಐಟಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದೆ.
ಮತದಾನದಂದು ನೀವು ರಜೆ ನೀಡಿದರೆ ಮತಗಟ್ಟೆಗೆ ಬಂದು ನಿಮ್ಮ ಉದ್ಯೋಗಿಗಳು ಮತ ಚಲಾಯಿಸುವುದಿಲ್ಲ. ಬದಲಿಗೆ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ.
ನಾವು ಮತದಾನದ ಪ್ರಮಾಣ ಹೆಚ್ಚಿಸಲು ಸಂಘಸಂಸ್ಥೆಗಳು, ವಿದ್ಯಾರ್ಥಿಗಳು, ನಾಗರಿಕರು ಸೇರಿದಂತೆ ಮತ್ತಿತರರ ಜೊತೆ ನಿರಂತರವಾಗಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ವಿದ್ಯಾವಂತರೇ ಮತದಾನದ ಬಗ್ಗೆ ಅಸಡ್ಡೆ ವಹಿಸಿದರೆ ಹೇಗೆ? ಎಂದು ಪ್ರಶ್ನಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುತ್ತದೆ.ಈ ಬಾರಿ ಮತದಾನದಂದು ರಜೆ ನೀಡಬಾರದೆಂದು ಐಟಿ ಮುಖ್ಯಸ್ಥರಿಗೆ ಆಯೋಗ ಮನವಿ ಮಾಡಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಮತದಾನದ ದಿನದಂದು ವೇತನ ಸಹಿತ ರಜೆ ನೀಡಲಾಗುತ್ತಿದೆ.ಇದಕ್ಕೆ ಈ ಬಾರಿ ಕೊಕ್ಕೆ ಹಾಕಲಾಗಿದೆ.ನಿಮಗೆ ಮತದಾನದ ದಿನದಂದು ವೇತನ ಸಿಗಬೇಕಾದರೆ ನೀವು ಮತ ಚಲಾಯಿಸಿರುವುದಕ್ಕೆ ಸಾಕ್ಷಿ ನೀಡಬೇಕು. ಹಾಗಿದ್ದರೆ ಮಾತ್ರ ವೇತನ ನೀಡಲಾಗುವುದು. ಇಲ್ಲದಿದ್ದರೆ ಸಂಬಳ ಕಡಿತ ಮಾಡುವುದಾಗಿ ಎಚ್ಚರಿಸಿದೆ.
ಮತದಾನ ಮಾಡಿದರೆ ನೀವು ನಿಮ್ಮ ನಿಮ್ಮ ಕಂಪನಿಗಳ ಎಚ್ಆರ್ಗಳಿಗೆ ಯಾವುದಾದರೂ ಆಧಾರ ಒದಗಿಸುವಂತೆ ಸೂಚಿಸಲಾಗಿದೆ.