ಮೈಸೂರು, ಏ.10- ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಈ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ನಗರಕ್ಕಾಗಮಿಸಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ನಿನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿ ಪ್ರತಾಪ್ ಸಿಂಹ ಹಾಗೂ ಶ್ರೀನಿವಾಸ ಪ್ರಸಾದ್ ಪರ ಮತ ಯಾಚಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದರು.
ಇಂದು ಮತ್ತೊಂದು ಪಕ್ಷದ ನಾಯಕಿ ತಮ್ಮ ಪಕ್ಷದ ಹವಾ ಎಬ್ಬಿಸಿದರು.ಮಧ್ಯಾಹ್ನ ನಗರಕ್ಕಾಗಮಿಸಿ ಬಿಎಸ್ಪಿ ನಾಯಕಿ ಮಾಯಾವತಿ ಇಂದು ಆಯೋಜಿಸಿದ್ದ ಸಮಾವೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಬಿಎಸ್ಪಿ ವತಿಯಿಂದ ಮೈಸೂರಿನಲ್ಲಿ ಮಾತ್ರ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದು, ಆ 28 ಅಭ್ಯರ್ಥಿಗಳ ಪರವಾಗಿ ಮಾಯಾವತಿ ಮತ ಯಾಚಿಸಿದರು.
ದೇಶ ಹಾಗೂ ಜನವಿರೋಧಿ ಬಿಜೆಪಿಯನ್ನು ಕಿತ್ತುಹಾಕಿ ಪಕ್ಷವನ್ನು ಬೆಂಬಲಿಸಬೇಕು. ಬಡವರ ಪರವಾದ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು.