ಬೇಕಿದ್ದರೆ ಉಚ್ಛಾಟಿಸಿ, ನಿಖಿಲ್ ಬೆಂಬಲಿಸಲ್ಲ : ಸಚಿವರ ಮುಂದೆ ಕೈ ಕಾರ್ಯಕರ್ತರ ಗಲಾಟೆ

ಮೈಸೂರು: ಲೋಕಸಭೆ ಚುನಾವಣೆ ಇನ್ನು 8 ದಿನಗಳು ಮಾತ್ರ ಬಾಕಿ ಉಳಿದಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಮಾತ್ರ ಬಿಗ್ ಫೈಟ್ ಮುಂದುವರಿದಿದೆ.

ಮೈಸೂರಿನ ಕೆ.ಆರ್ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಗಲಾಟೆ ಮಾಡಿಕೊಂಡಿದ್ದು ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ.12ರಂದು ಆಗಮನದ ಹಿನ್ನೆಲೆಯಲ್ಲಿ ಮಂಗಳವಾರ ನಾಮಧಾರಿ ಸಮುದಾಯ ಭವನದಲ್ಲಿ ಸಭೆ ಆಯೋಜನೆಗೊಂಡಿತ್ತು.

ಚುನಾವಣೆ ಪೂರ್ವಭಾವಿ ನಡೆದ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡಲು ವಿರೋಧ ವ್ಯಕ್ತವಾಗಿದ್ದು, ಮಾತಿಗೆ ಮಾತು ಬೆಳೆದು ಸಭೆ ಗಲಾಟೆಗೆ ತಿರುಗಿದೆ. ಕೆ.ಆರ್.ನಗರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಿ.ರವಿಶಂಕರ್, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಬಣಗಳ ನಡುವೆ ಘರ್ಷಣೆ ನಡೆದಿದ್ದು, ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ನಿಖಿಲ್, ಶಾಸಕ ಸಾ.ರಾ.ಮಹೇಶ್ ಮತ್ತು ಜೆಡಿಎಸ್ ನಾಯಕರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ವೋಟ್ ಹಾಕುವುದಿಲ್ಲ. ಬೇಕಿದ್ದರೆ ಪಕ್ಷದಿಂದ ಉಚ್ಛಾಟಿಸಿ ಎಂದು ಕೂಗಾಡಿದ್ದಾರೆ.

ಇತ್ತ ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡರಿಗೆ ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಾಂಗ್ರೆಸ್ ಹಿರಿಯ ನಾಯಕ ರೆಹಮಾನ್ ಖಾನ್ ಮನೆಯಲ್ಲಿ ನಡೆದ ಸಭೆಯಲ್ಲಿ ಮನ್‍ಮುಲ್ ನೇಮಕಾತಿ ತಪ್ಪಿಸಿದ್ದು, ಶ್ರೀಕಂಠೇಗೌಡರು ಎಂದು ಆರೋಪಿಸಿ ಕಿಡಿಕಾರಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ