ಮತಗಳಿಸುವ ಉದ್ಧೇಶದಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿದೆ-ಎಐಸಿಸಿ ವಕ್ತಾರೆ ಖುಷ್ಬು ಸುಂದರ್

ಬೆಂಗಳೂರು, ಏ.10- ಬಿಜೆಪಿ 2014ರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ಈಗ ಮತ್ತೆ ಹೊಸದಾಗಿ ಸಂಕಲ್ಪ ಪತ್ರವನ್ನು ಹೊರಡಿಸಿದೆ.

ಅದನ್ನೂ ಸುಳ್ಳಿನಿಂದಲೇ ಆರಂಭಿಸಿ ಸುಳ್ಳಿನಿಂದಲೇ ಮುಕ್ತಾಯಗೊಳಿಸಲಾಗಿದೆ ಎಂದು ಎಐಸಿಸಿ ವಕ್ತಾರರೂ ಆಗಿರುವ ನಟಿ ಖುಷ್ಬು ಸುಂದರ್ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶದಿಂದ ಮಾತ್ರ ಬಿಜೆಪಿ ಪ್ರಣಾಳಿಕೆಯನ್ನು ಸಿದ್ದಗೊಳಿಸಿದೆ. ಆದರೆ, ಕಾಂಗ್ರೆಸ್‍ನ ಪ್ರಣಾಳಿಕೆ ಆ ರೀತಿ ಇಲ್ಲ. ದೇಶವನ್ನು ಸುಭದ್ರಗೊಳಿಸುವುದು, ಜನರ ಜೀವನವನ್ನು ಹಸನು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನಸಾಮಾನ್ಯರ ಅಭಿವೃದ್ಧಿ, ದೇಶದ ಪ್ರಗತಿ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆ, ಉದ್ಯೋಗ, ಗಡಿಭಾಗದ ಯೋಧರ ಸುರಕ್ಷತೆ, ದೇಶ ರಕ್ಷಣೆ, ಮಹಿಳಾ ಸುರಕ್ಷತೆ ಸೇರಿ ಹಲವಾರು ಅಂಶಗಳಿವೆ ಎಂದು ತಿಳಿಸಿದರು.

ಎಪ್ಪತ್ತೆರಡು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ.ಅವರಿಗೆ ಕಾಂಗ್ರೆಸ್‍ನ ಅಭಿವೃದ್ಧಿಗಳು ಕಾಣುವುದಿಲ್ಲ.

ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು ಉದ್ಯೋಗ ಖಾತ್ರಿ ಯೋಜನೆಯನ್ನು ಟೀಕಿಸಿದ್ದರು.ಆದರೆ, ಆ ಯೋಜನೆಗೆ ವಿಶ್ವದಾದ್ಯಂತ ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಹೇಳಿದರು.

ನಾವು ಚುನಾವಣೆ ವೇಳೆ ಹೇಳಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಭಾರತೀಯ ಜುಮ್ಲಾ ಪಾರ್ಟಿ ಬಿಜೆಪಿ ಜನರಿಗೆ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಬದಲಾಗಿ ನೋಟು ಅಮಾನೀಕರಣ ಮಾಡಿ ಜನಸಮಾನ್ಯರ ಬದುಕನ್ನು ಕುಸಿಯುವಂತೆ ಮಾಡಿದೆ.ಗಬ್ಬರ್‍ಸಿಂಗ್ ಟ್ಯಾಕ್ಸ್ ಜಿಎಸ್‍ಟಿ ಮೂಲಕ ವ್ಯಾಪಾರೋದ್ಯಮಗಳು ಹಾಳುಗುವಂತೆ ಮಾಡಿತು.ದೇಶ ರಕ್ಷಣೆ ಮಾಡುವ ಯೋಧರ ಬಗ್ಗೆಯೂ ಬಿಜೆಪಿಗೆ ಗೌರವವಿಲ್ಲ. ಅವರ ತ್ಯಾಗ, ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಂಡಿತು ಎಂದು ಖುಷ್ಬು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಳ್ಳುವ ಚೌಕಿದಾರ್ ನರೇಂದ್ರ ಮೋದಿ ಅವರು ರಫೇಲ್ ಹಗರಣದ ದಾಖಲಾತಿಗಳು ಹೇಗೆ ಕಳ್ಳತನವಾದವು ಎಂಬುದನ್ನು ದೇಶದ ಜನತೆಗೆ ಹೇಳಬೇಕು.ಬಿಜೆಪಿಯ ಧೋರಣೆ ಹೇಗೆ ಎಂದರೆ ನನ್ನ ದುಡ್ಡು ನನ್ನದೇ, ನಿಮ್ಮ ದುಡ್ಡೂ ನನ್ನದೇ ಎಂಬಂತಿದೆ ಎಂದು ವಾಗ್ದಾಳಿ ನಡೆಸಿದರು.

ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಬಿಜೆಪಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಅವರು ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ