ಜೆರುಸಲೆಂ, ಏ.10- ಇಸ್ರೇಲ್ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ಬೆಂಜಮಿನ್ ನೆತನಾಹ್ಯು ಐದನೆ ಬಾರಿ ಅಧಿಕಾರಕ್ಕೇರುವುದು ಖಚಿತವಾಗಿದೆ.ಇದರೊಂದಿಗೆ ಇಸ್ರೇಲ್‍ನಲ್ಲಿ ಬಲಪಂಥೀಯ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
69 ವರ್ಷಗಳ ಪ್ರಧಾನಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದರೂ ಅವರು ಐದನೆ ಬಾರಿ ಪ್ರಧಾನಿಯಾಗುವ ಮೂಲಕ ದೇಶದ ಅತ್ಯುನ್ನತ ಹುದ್ದೆಯಲ್ಲಿ ದೀರ್ಘಾವಧಿ ಮುಂದುವರಿದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬೆಂಜಮಿನ್ ನೆತನಾಹ್ಯು ನೇತೃತ್ವದ ಲಿಕುಡ್ ಪಾರ್ಟಿ, ಮಾಜಿ ಸೇನಾ ಮುಖ್ಯಸ್ಥ ಬೆನ್ನಿ ಗಂಟ್ಜ್ ಅವರ ಸೆಂಟ್ರಿಸ್ಟ್ ಬ್ಯೂ ಅಂಡ್ ವೈಟ್ ಮೈತ್ರಿಕೂಟಕ್ಕಿಂತ ಭಾರೀ ಮುನ್ನಡೆ ಸಾಧಿಸಿದೆ.
ಈವರೆಗೆ ಶೇ.97ರಷ್ಟು ಮತ ಎಣಿಕೆಯಾಗಿದ್ದು, 120 ಸದಸ್ಯ ಬಲದ ಸಂಸತ್ತಿನಲ್ಲಿ ಲಿಕುಡ್ ಮತ್ತು ಮಿತ್ರ ಪಕ್ಷಗಳು 65 ಸ್ಥಾನಗಳನ್ನು ಗಳಿಸಿ ಮುನ್ನಡೆಯಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲವು ಕ್ಷೇತ್ರಗಳ ಮತ ಎಣಿಕೆ ಮುಂದುವರಿದಿದ್ದು, ಲಿಕುಡ್ ಪಕ್ಷದ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.