ಮೈಸೂರು, ಏ.10-ಲೋಕಸಭೆ ಚುನಾವಣೆ ನಂತರ ಮುಂದಿನ ಜೀವನ ನೀರ ಮೇಲಿನ ಗುಳ್ಳೆಯಂತಾದರೆ ಏನು ಮಾಡುವುದು ಎಂದು ಮೈಸೂರಲ್ಲಿ ಮೈತ್ರಿ ಕಾರ್ಯಕರ್ತರು ಚಿಂತೆಗೀಡಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ತೀವ್ರ ವಿರೋಧಿಗಳಾಗಿದ್ದರು.ಇದೀಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳ ನಾಯಕರೆಲ್ಲ ಒಂದಾಗಿದ್ದಾರೆ. ಆದರೆ, ಚುನಾವಣೆ ನಂತರ ನಮ್ಮ ಪಾಡು ಏನು ಎಂಬುದು ಕಾಂಗ್ರೆಸ್-ಜೆಡಿಎಸ್ ಸದಸ್ಯರನ್ನು ಕಾಡುತ್ತಿದೆ.
ವೇದಿಕೆಯಲ್ಲಿ ಮೈತ್ರಿ ಪಕ್ಷದ ನಾಯಕರು ಒಂದಾಗಿ ಇವರು ಅವರ ಪರ, ಅವರು ಇವರ ಪರ ಮಾತನಾಡಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಯೋಚಿಸುತ್ತಿದ್ದಾರೆ. ಅಭ್ಯರ್ಥಿಗಳ ಗೆಲುವಿಗಾಗಿ ಏನು ಮಾಡಬೇಕೋ ಅಷ್ಟನ್ನು ಮಾತ್ರ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಂಡು ನಾಯಕರು ಒಟ್ಟಾಗಿ ಹೋಗುತ್ತಿದ್ದಾರೆ.ಆದರೆ, ಇವರ್ಯಾರಿಗೂ ನಮ್ಮ ಬಗ್ಗೆ ಚಿಂತೆ ಇಲ್ಲ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಮನದಾಳದ ನೋವುಗಳು ಇವರಿಗೆ ಬೇಕಿಲ್ಲ. ನಮ್ಮ ಸ್ಥಿತಿ ಏನಾಗುವುದೋ ಎಂಬ ಚಿಂತೆಯೂ ಅವರಿಗಿಲ್ಲ. ಒಟ್ಟಾರೆ ಚುನಾವಣೆಗಾಗಿ ಒಗ್ಗಟ್ಟಾಗಿರುವ ನಾಯಕರು ಕಾರ್ಯಕರ್ತರ ಬಗ್ಗೆಯೂ ಚಿಂತಿಸಬೇಕಾಗಿದೆ.
ಚುನಾವಣಾ ಫಲಿತಾಂಶ ಬಂದ ನಂತರ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ನಮ್ಮ ಭವಿಷ್ಯ ನಿಂತಿದೆ ಎಂಬುದು ಕಾರ್ಯಕರ್ತರ ಅನಿಸಿಕೆ. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ವಿರೋಧಿಗಳಾಗಿಯೇ ಇದ್ದರು. ಇದೀಗ ಚುನಾವಣಾ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಮುಂದೆ ನಮ್ಮ ಪಾಡೇನು ಎಂಬುದು ಕಾರ್ಯಕರ್ತರನ್ನು ಕಾಡುತ್ತಿರುವ ಪ್ರಶ್ನೆ.
ಪಕ್ಷದ ನಾಯಕರ ಒತ್ತಾಯದ ಮೇರೆಗೆ ಕೆಲವು ಕಾರ್ಯಕರ್ತರು ಹಿಂದಿನದ್ದನ್ನೆಲ್ಲ ಮರೆತು ಪ್ರಚಾರದಲ್ಲಿ ತೊಡಗಿದ್ದಾರೆ.ಇನ್ನೂ ಕೆಲವು ಕಾರ್ಯಕರ್ತರು ಯೋಚಿಸುವಂತಾಗಿದೆ.