ಬೆಂಗಳೂರು,ಏ.9- ಕೇಂದ್ರದಿಂದ ಹೆಚ್ಚು ಅನುದಾನ ಕೊಡಿಸಿ ಎಂದು ನನ್ನ ಮನೆ ಬಾಗಿಲಿಗೆ ಬಂದಿದ್ದನ್ನು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಮರೆತಿದ್ದಾರೆಯೇ ಅಥವಾ ಇದು ಕಾಂಗ್ರೆಸಿಗರ 420 ಬುದ್ಧಿ ಎನ್ನಬೇಕೇ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವೀರಾಂಜನೇಯ ದೇವಸ್ಥಾನದ ಸಮೀಪ ಮಂಗಳವಾರ ಬೆಳಿಗ್ಗೆ ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸದಾನಂದಗೌಡರು ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಕೃಷ್ಣ ಬೈರೇಗೌಡ ಆರೋಪಿಸುತ್ತಿದ್ದಾರೆ.ಇದು ಮರೆಗುಳಿತನವೇ, ಚುನಾವಣಾ ರಾಜಕೀಯವೇ ಎಂಬುದನ್ನು ಸ್ಪಷ್ಟಪಡಿಸಬೇಕು.
ಒಂದೂವರೆ ತಿಂಗಳ ಹಿಂದಷ್ಟೇ ದೆಹಲಿಯ ನನ್ನ ಮನೆಯಲ್ಲಿ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರನ್ನು ಆಹ್ವಾನಿಸಿ ಚರ್ಚೆ ನಡೆಸಿ ಕೇಂದ್ರದಿಂದ ಹೆಚ್ಚು ಅನುದಾನ ಕೊಡಿಸಿದ್ದನ್ನು ಕೃಷ್ಣ ಬೈರೇಗೌಡರು ಮರೆತಿರಬೇಕು.ಈ ಸಭೆಗೆ ಕೃಷ್ಣ ಬೈರೇಗೌಡರೂ ಆಗಮಿಸಿದ್ದರು ಎಂದು ತಿರುಗೇಟು ನೀಡಿದರು.
ಯುಪಿಎ ಸರಕಾರ 2009-2014 ರಲ್ಲಿ ರಾಜ್ಯಕ್ಕೆ 74.5 ಸಾವಿರ ಕೋಟಿ ರು.ಅನುದಾನ ನೀಡಿತ್ತು.ಬಿಜೆಪಿಯು 2014-2019 ರಲ್ಲಿ 2.42 ಲಕ್ಷ ಕೋಟಿ ರು.ಅನುದಾನವನ್ನು ಅಂದರೆ ಮೂರುಪಟ್ಟು ಅನುದಾನ ನೀಡಿದೆ.ಇದು ಕೃಷ್ಣ ಬೈರೇಗೌಡ ಅವರಿಗೆ ಗೊತ್ತಿಲ್ಲವೇ. ಹೋಟೆಲ್ಗಳಲ್ಲಿ ಕುಳಿತು ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿಸುವುದು ಮಾತ್ರ ಗೊತ್ತಾ ಎಂದು ಪ್ರಶ್ನಿಸಿದರು.
ಬುರ್ಖಾ ಹಾಕಿಕೊಂಡು ಮತಕೇಳಬೇಕಿದೆ
ಮೋದಿ ಮುಖವಾಡ ಹಾಕಿಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಸದಾನಂದಗೌಡರು, ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸಿಗರು ಬುರ್ಖಾ ಹಾಕಿಕೊಂಡು ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ನಾವು ಮತ ಯಾಚಿಸುತ್ತಿದ್ದೇವೆ. ಕಾಂಗ್ರೆಸಿಗರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರೇಳಿಕೊಂಡು ಮತ ಯಾಚಿಸಲಿ ಎಂದು ವ್ಯಂಗ್ಯವಾಡಿದರು.
ಸಂಸದರ ಅನುದಾನ ಬಳಕೆಯಲ್ಲಿ ನಾನು ನಂ.1 ಎಂದು ಬಿ ಪ್ಯಾಕ್ ಬಿಡುಗಡೆ ಮಾಡಿದ ವರದಿ ಹೇಳಿದೆ.ರಾಜ್ಯದ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದು ವಿವರಿಸಿದರು.
ಮುಖಂಡರಾದ ಹರೀಶ್, ಶಂಕರಪ್ಪ, ಪ್ರಸನ್ನ, ರಾಜಣ್ಣ, ಎಂ.ನಾಗರಾಜ್, ರಾಜೇಂದ್ರ ಕುಮಾರ್, ಶಿವಾನಂದ್, ರಂಗಣ್ಣ, ಗಂಗಹನುಮಯ್ಯ, ಜಯಸಿಂಹ ಮತ್ತಿತರರು ಹಾಜರಿದ್ದರು.