ಬೆಂಗಳೂರು,ಏ.9-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಪರ ಮತಯಾಚನೆ ಮಾಡುವ ಮೂಲಕ ಕರುನಾಡಿನಲ್ಲಿ ವಿದ್ಯುಕ್ತವಾಗಿ ಚುನಾವಣಾ ರಣಕಹಳೆ ಮೊಳಗಿಸಿದರು.
ಮಧ್ಯಾಹ್ನ ಮಹಾರಾಷ್ಟ್ರದಿಂದ ವಿಶೇಷ ವಿಮಾನದ ಮೂಲಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿರುವ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸಂಸ್ಥೆಗೆ ಆಗಮಿಸಿದ ಅವರನ್ನು ರಾಜ್ಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಅಲ್ಲಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ನಲ್ಲಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನಕ್ಕೆ ಮೋದಿ ಆಗಮಿಸಿದರು.
ತುಮಕೂರು, ಚಿತ್ರದುರ್ಗ, ದಾವಣಗೆರೆ ಲೋಕಸಭಾ ಕ್ಷೇತ್ರಗಳಿಂದ ಆಗಮಿಸಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರವನ್ನು ವಾಚಾಮಗೋಚರವಾಗಿ ಟೀಕಿಸಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಸುಮಾರು 45 ನಿಮಿಷಗಳ ಕಾಲ ಕೇಂದ್ರ ಸರ್ಕಾರದ ಸಾಧನೆಗಳು, ಕಾಂಗ್ರೆಸ್ನ ಭ್ರಷ್ಟಾಚಾರ ಹಾಗೂ ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾಂಗ್ರೆಸ್ ಇಂದು ಪ್ರತಿಯೊಂದನ್ನು ಅನುಮಾನದಿಂದಲೇ ನೋಡುತ್ತಿದೆ. ದೇಶದ ಸೈನಿಕರು , ಸರ್ಜಿಕಲ್ ಸ್ಟ್ರೈಕ್, ಬಾಲ್ಕೋಟ್ ಮೇಲೆ ನಡೆದ ವೈಮಾನಿಕ ದಾಳಿಗೆ ಸಾಕ್ಷಿ ಕೇಳುವ ಮೂಲಕ ಸೈನಿಕರನ್ನು ಅವಮಾನಿಸುತ್ತಿದೆ. ಇಂಥವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ.ಏನೇ ಸರ್ಕಸ್ ನಡೆಸಿದರು ಗೆಲ್ಲುವುದಿಲ್ಲ ಎಂಬುದು ಖಾತರಿಯಾಗಿದೆ.ಹೀಗಾಗಿ ಬಿಜೆಪಿ ಮತ್ತು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಅಪಪ್ರಚಾರ ನಡೆಸುತ್ತಿದೆ. ಆಕಾಶದಿಂದ ನೆಲದವರೆಗೂ ಭ್ರಷ್ಟಾಚಾರ ನಡೆಸಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಕುಟುಕಿದರು.
ಕಾಂಗ್ರೆಸ್ನ ಅನೇಕ ನಾಯಕರು ಇಂದು ಜಾಮೀನಿನ ಮೇಲೆ ಹೊರಗಿದ್ದಾರೆ.ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳಲು ತನಿಖಾ ಸಂಸ್ಥೆಗಳನ್ನೇ ಟೀಕೆ ಮಾಡುತ್ತಿದ್ದಾರೆ.ಮಹಾಘಟ್ ಬಂಧನ್ ಒಂದು ಅವಕಾಶವಾದಿಗಳ ಕೂಟ.ಇಲ್ಲಿ ಇರುವವರೆಲ್ಲರೂ ಪ್ರಧಾನಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.
ಈ ಬಾರಿ ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿ, ಜಿ.ಎಂ.ಸಿದ್ದೇಶ್ವರ್ ಮತ್ತು ಜಿ.ಎಚ್.ಬಸವರಾಜ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು.
ಇನ್ನು ಜಿಲ್ಲಾ ಘಟಕದ ವತಿಯಿಂದ ಪ್ರಧಾನಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಮಲದ ಕಸೂತಿ ಇರುವ ಬಿಳಿ ಕಂಬಳಿಯಿಂದ ಹೊದಿಸಿ ಗೌರವಿಸಲಾಯಿತು.
ನಂತರ ಮೋದಿ ಅವರಿಗೆ ಕರ್ನಾಟಕದ ಪವಾಡ ಪುರುಷ ಎಂದೇ ಕರೆಯುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮಾದರಿಯನ್ನು ಉಡುಗೊರೆಯಾಗಿ ನೀಡಲಾಯಿತು.