ಸಿ ವಿಜುಲ್ ಬಳಸಿ ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ನೀಡಿ-ರಾಜ್ಯ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು,ಏ.9- ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇಲ್ಲವೆ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡುವಂತಹ ಪ್ರಕರಣಗಳು ಕಂಡುಬಂದರೆ ಸಿ ವಿಜುಲ್ ಬಳಸಿ ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ 15 ನಿಮಿಷದಲ್ಲಿ ಆಯೋಗದ ಸಿಬ್ಬಂದಿಗಳು ಸ್ಥಳಕ್ಕೆ ಬಂದು, ನೂರು ನಿಮಿಷದಲ್ಲಿ ಅದರ ತನಿಖಾ ವರದಿ ಸಲ್ಲಿಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರೆಸ್‍ಕ್ಲಬ್ ಮತ್ತು ಬೆಂಗಳೂರು ವರದಿಗಾರ ಕೂಟದವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮ ಮಾತು-ಮಂಥನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೂ 1668 ದೂರುಗಳು ಮಾತ್ರ ಬಂದಿವೆ. ಕೇರಳದಲ್ಲಿ ಎಂಟು ಸಾವಿರ ದೂರು ಬಂದಿವೆ. ಅಲ್ಲಿಗೆ ಹೋಲಿಸಿದರೆ ನಮ್ಮಲ್ಲಿ ದೂರು ಸಂಖ್ಯೆ ಕಡಿಮೆ.ಸಿ ವಿಜುಲ್ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕು ಎಂದು ಅಭಿಪ್ರಾಯಪಟ್ಟರು.

ಸಹಾಯವಾಣಿ ಮೂಲಕವೂ ದೂರ ನೀಡಬಹುದಾಗಿದೆ. ಈವರೆಗೆ ಎಪ್ಪತ್ತು ಸಾವಿರ ಕರೆಗಳು ಬಂದಿದ್ದು, ಈ ಪೈಕಿ 3716 ದೂರು ಬಂದಿವೆ, ಸುದ್ದಿ ಪತ್ರಿಕೆಗಳ ವಿರುದ್ಧ 263, ಟಿವಿಗಳ ವಿರುದ್ದ 59, ಸಾಮಾಜಿಕ ಜಾಲ ತಾಣದ ಸಂಬಂಧ 194 ದೂರುಗಳು ದಾಖಲಾಗಿವೆ ಎಂದು ವಿವರಿಸಿದರು.

ಅಕ್ರಮ ಹಣ ಸಾಗಾಣಿಕೆಗೆ ಪೊಲೀಸ್ ವಾಹನ ,ಸಿಎಂ ಸೇರಿ ಎಲ್ಲರ ವಾಹನ ಚೆಕ್ ಮಾಡುತ್ತಿದ್ದೇವೆ. ಪೋಸ್ಟ್ ಬ್ಯಾಲೆಟ್ ಬಹಿರಂಗ ಮಾಡಿದರೆ ತಪ್ಪು . ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫೇಸ್‍ಬುಕ್ ಮತ್ತು ಟ್ವಿಟರ್‍ಗೆ ಸೂಚನೆ ನೀಡಿ ಸಾಮಾಜಿಕ ಜಾಲ ತಾಣಗಳಲ್ಲಿನ ಜಾಹಿರಾತುಗಳನ್ನು ಹಿಂಪಡೆಯಲಾಗುತ್ತದೆ.63 ಕೋಟಿ ಮತ್ತು ಮೂರವರೆ ಕೋಟಿ ಮೌಲ್ಯದ ಎಂಟು ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಚುನಾವಣೆ ಉಪಚುನಾವಣೆಯಲ್ಲಿ ಸವಾಲುಗಳಿವೆ. ಆಯೋಗದ ಸೂಚನೆಗಳನ್ನು ಪಾಲಿಸಬೇಕು.ರಾಜಕೀಯ ಪಕ್ಷಗಳು, ಮಾಧ್ಯಮಗಳು, ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು.

ಜನ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡು ಮತ ಹಾಕಬೇಕು. ನಾಮಪತ್ರದಲ್ಲಿ ಅಭ್ಯರ್ಥಿಗಳ ಆಸ್ತಿ ಮತ್ತು ಕ್ರಿಮಿನಲ್ ಕೇಸುಗಳ ವಿವರ ಇರುತ್ತದೆ.ಜನ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಅವುಗಳನ್ನು ಪರಿಶೀಲಿಸಬಹುದು.

ಹಿಂದಿನ ಐದು ವರ್ಷದಲ್ಲಿ ಚುನಾಯಿತರ ಆಸ್ತಿ ಎಷ್ಟು ಬೆಳೆದಿದೆ ನೋಡಿ, ಚರ್ಚೆ ಮಾಡಿ ಆ ಮೇಲೆ ಒಳ್ಳೆಯವರು ಯಾರು ಕೆಟ್ಟವರು ಯಾರು ಎಂದು ನಿರ್ಧಾರ ಮಾಡಿ ಮತ ಹಾಕಿ ಎಂದು ಮನವಿ ಮಾಡಿದರು.

ಮತದಾರರು ಸ್ವವಿವೇಕದಿಂದ ಮತ ಚಲಾಯಿಸಬೇಕು.ಜನರೇ ಜಾಗೃತರಾಗಬೇಕು. ನಾವು ಜಾಗೃತಿ ಮೂಡಿಸಬೇಕು. ಸುಮ್ಮನೆ ಹೋಟೆಲ್ ಬುಕಿಂಗ್ ಮಾಡಬಾರದು ಅದಕ್ಕೆ ಅವಕಶ ಇಲ್ಲ.ಪಿರಿಯೆಡ್ ಆಫ್ ಸೈಲೆನ್ಸ್ ಅವಧಿಯಲ್ಲಿ ಹೊರಗಿನವರನ್ನು ಹೊರ ಹಾಕಬೇಕು. ಹೊರಗಿನವರನ್ನು ಸ್ಥಳೀಯರು ಗುರುತಿಸುವುದು ಕಷ್ಟ ಎಂದು ಹೇಳಿದರು.

ಆಯೋಗಕ್ಕೆ ದೂರು: ಎಚ್.ಕೆ.ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಂಜೀವ್‍ಕುಮಾರ್, ಈ ಬಗ್ಗೆ ಕೇಂದ್ರ ಆಯೋಗದ ಗಮನಕ್ಕೆ ತರುತ್ತೇವೆ. ಯಾವುದೇ ತೀರ್ಮಾನ ಕೈಗೊಳ್ಳುವ ಸ್ವತಂತ್ರ ಹೊಣೆಗಾರಿಕೆ ಆಯೋಗಕ್ಕಿದೆ ಎಂದರು.

ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಮತದಾನದ ಅವಧಿ ಇರಲಿದೆ ಎಂದು ತಿಳಿಸಿದರು.

ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಮಂದಿ ಇರುತ್ತಾರೆ.ಮೂರುವರೆ ಲಕ್ಷ ಸಿಬ್ಬಂದಿ, ಎಂಬತ್ತು ಸಾವಿರ ಪೊಲೀಸ್, ಮತ ಎಣಿಕೆಗೆ ಮುವತ್ತು ಸಾವಿರ ಸಿಬ್ಬಂದಿ ಭಾಗವಹಿಸುತ್ತಾರೆ.ವಿವಿ ಪ್ಯಾಟ್‍ನಲ್ಲಿ ಒಂದು ಸ್ಲಿಪ್ ಬರುತ್ತದೆ.

ಅದರಲ್ಲಿ ಅಭ್ಯರ್ಥಿ ಚಿಹ್ನೆ, ಕ್ರಮ ಸಂಖ್ಯೆ ಇರುತ್ತದೆ.ಅದನ್ನು ಗಮನಿಸಿ ಮತ ಚಲಾಯಿಸಬಹುದು.

ಹಿಂದೆ ಪ್ರತಿ ಕ್ಷೇತ್ರಕ್ಕೆ ಒಂದು ಬೂತ್ ನಲ್ಲಿ ರ್ಯಾಂಡಮ್ ಚೆಕ್ ಇರುತ್ತಿತ್ತು. ಸುಪ್ರಿಂಕೋರ್ಟ್ ಈಗ ಐದು ಮತಗಟ್ಟೆಯಲ್ಲಿ ರ್ಯಾಂಡಮ್ ಚೆಕ್ ನಡೆಸುವಂತೆ ಸೂಚಿಸಿದೆ. ಇದರಿಂದ ಮೂರು ಗಂಟೆ ಹೆಚ್ಚು ಸಮಯ ಬೇಕಿದೆ.ಸುಮಾರು ಐದು ಸಾವಿರ ಜನ ಹೆಚ್ಚುವರಿ ಸಿಬ್ಬಂದಿ ಬೇಕಾಗುತ್ತದೆ.

ನಾಮಪತ್ರವನ್ನು ಪರಿಶೀಲನೆ ಚುನಾವಣಾಧಿಕಾರಿ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದೇ ಅಂತಿಮ. ತಕರಾರು ಇದ್ದರೆ ಕೋರ್ಟ್‍ಗೆ ಹೋಗಬೇಕು. ಬೇರೆ ಯಾರು ಅದನ್ನು ಪರಿಶೀಲನೆ ಮಾಡಲು ಬರಲ್ಲ. ಚುನಾವಣಾ ತಕರಾರು ಅರ್ಜಿಯನ್ನೇ ಸಲ್ಲಿಸಬೇಕು ಎಂದು ಸಂಜೀವ್‍ಕುಮಾರ್ ತಿಳಿಸಿದರು.

ಆಯೋಗದ ಹಿರಿಯ ಅಧಿಕಾರಿಗಳಾದ ಡಾ.ಕೆ.ವೆಂಕಟೇಶ್, ರಾಘವೇಂದ್ರ ಕೆ, ಪ್ರೆಸ್ ಕ್ಲಬ್ ನ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಬೆಂಗಳೂರು ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ