ಐಟಿ ದಾಳಿ ಸ್ಪಷ್ಟನೆ ನೀಡುವಂತೆ ಸಿಬಿಡಿಟಿಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ವಿಪಕ್ಷ ನಾಯಕರ ಮೇಲೆ ಐಟಿ ದಾಳಿ ನಡೆಸುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಮುಖ್ಯಸ್ಥ ಹಾಗೂ ಆದಾಯ ಕಾರ್ಯದರ್ಶಿಗೆ ಬುಲಾವ್ ನೀಡಿದೆ.

ಸಿಬಿಡಿಟಿ ಮುಖ್ಯಸ್ಥ ಪಿಸಿ ಮೂಡಿ ಹಾಗೂ ಆದಾಯ ಕಾರ್ಯದರ್ಶಿ ಎಬಿ ಪಾಂಡೆ ಅವರಿಗೆ ಚುನಾವಣಾ ಆಯೋಗ ವಿಪಕ್ಷ ನಾಯಕರ ಮೇಲೆ ದಾಳಿ ಕುರಿತಂತೆ ಸ್ಪಷ್ಟನೆ ನೀಡಲು ಬರುವಂತೆ ಸೂಚಿಸಿದೆ.

ಹಣಕಾಸು ಮತ್ತು ಕಂದಾಯ ಸಚಿವಾಲಯಗಳ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಚುನಾವಣೆ ವೇಳೆ ತಟಸ್ಥ ಧೋರಣೆ ಹೊಂದಿರುವುದು ಒಳ್ಳೆಯದು ಎಂದು ಚುನಾವಣಾ ಆಯೋಗವು ಗಂಭೀರ ಸಲಹೆ ನೀಡಿತ್ತು. ಅಲ್ಲದೆ ಜಾರಿಯಲ್ಲಿರುವ ಅವಧಿಯಲ್ಲಿ ಚುನಾವಣೆ ಉದ್ದೇಶಕ್ಕಾಗಿ ಕಪ್ಪುಹಣದ ಬಳಕೆಯಾಗುತ್ತಿದೆ ಎನ್ನುವ ಗುಮಾನಿ ಇದ್ದರೆ ಅಥವಾ ಪ್ರಕರಣಗಳ ಕುರಿತು ಮಾಹಿತಿ ಸಿಕ್ಕರೆ ಆಯಾ ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ಮಾಹಿತಿ ನೀಡಿಯೇ ದಾಳಿ ನಡೆಸಬೇಕು ಎಂದೂ ಆಯೋಗ ನಿರ್ದೇಶನ ನೀಡಿತ್ತು.

ಚುನಾವಣೆ ಘೋಷಣೆಯಾದ ಬಳಿಕ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆಗಾಗಿ ಚುನಾವಣಾ ಆಯೋಗ ಸೂಚನೆ ನೀಡಿದೆ.

EC Summons CBDT Officials to Discuss IT Raids on Opposition Leaders

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ