ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನ-ಪಕ್ಷೇತರರಿಗೆ ಭಾರೀ ಬೇಡಿಕೆ

ಕಲಬುರಗಿ,ಏ.8- ಲೋಕಸಭಾ ಚುನಾವಣೆಯ 2ನೇ ಹಂತದ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಪಕ್ಷೇತರರಿಗೆ ಭಾರೀ ಬೇಡಿಕೆ.

ವಿಶೇಷವಾಗಿ ಕಲಬುರಗಿಯಲ್ಲಿ ಜಾಧವ್ ಹೆಸರಿನ ನಾಲ್ವರು ಪಕ್ಷೇತರ ಅಭ್ಯರ್ಥಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್.

ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿಯವರು ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ಕಣದಲ್ಲಿ ಉಳಿಯುವಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಕಸರತ್ತು ನಡೆಸಿದೆ. ಒಟ್ಟಾರೆ ಪಕ್ಷೇತರ ಅಭ್ಯರ್ಥಿಗಳು ಇದೀಗ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.

ಕಲಬುರಗಿಯಲ್ಲಿ ಉಮೇಶ್ ಜಾಧವ್, ವಿಠಲ್ ಜಾಧವ್, ಶಂಕರ್ ಜಾಧವ್, ವಿಜಯ್ ಜಾಧವ್ ಸೇರಿದಂತೆ ನಾಲ್ವರು ಜಾಧವ್ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಹಾಗಾಗಿ ಪಕ್ಷೇತರ ಹೆಸರಿನ ಜಾಧವ್‍ರಿಗೆ ನಾಮಪತ್ರ ವಾಪಸ್ ಪಡೆಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ಇದಕ್ಕಾಗಿ ಚೌಕಾಸಿ ಪಾಲಿಟಿಕ್ಸ್ ಕೂಡ ಮಾಡುತ್ತಿದೆ. ಈ ಮೂಲಕ ಕಲಬುರಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆಯ ಮುಂಚೆಯೇ ಡಿಮ್ಯಾಂಡ್ ಬಂದಿದೆ.

ಕಲಬುರಗಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು.ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ ಸ್ಪರ್ಧೆ ಮಾಡಿದ್ದಾರೆ. ಆದರೆ ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ