ಇವಿಎಂ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಸುಪ್ರೀಂ ಕೋರ್ಟ್ ಇವಿಎಂ ವಿಚಾರವಾಗಿ ಮಹತ್ವದ ಆದೇಶವನ್ನು ನೀಡಿದೆ.

ಒಂದು ಕ್ಷೇತ್ರದ ಬದಲಾಗಿ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿ ಪ್ಯಾಟ್ ಹಾಗೂ ಇವಿಎಂ ಯಂತ್ರಗಳಲ್ಲಿ ಚಲಾವಣೆಯಾದ ಮತಗಳನ್ನು ತಾಳೆ ಮಾಡಬೇಕು ಎಂದು ಆದೇಶ ನೀಡಿದೆ.

ಇವಿಎಂ ಬಳಕೆಯ ಕುರಿತು ಸುಪ್ರೀಂ ಕೋರ್ಟಿಗೆ ದೇಶದ 21 ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ, ನ್ಯಾ. ದೀಪಕ್ ಗುಪ್ತಾ ಹಾಗೂ ನ್ಯಾ. ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠ ಈ ಆದೇಶವನ್ನು ಪ್ರಕಟಿಸಿದೆ.

ಇಲ್ಲಿಯವರೆಗೆ ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಚಲಾವಣೆಯಾದ ಇವಿಎಂ ಮತಗಳನ್ನು ವಿವಿಪ್ಯಾಟ್ ನಲ್ಲಿ ಬಿದ್ದ ಮತಗಳ ಜೊತೆ ತಾಳೆ ಮಾಡಲಾಗುತಿತ್ತು. ಆದರೇ ಈಗ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇವಿಎಂ ಮತ್ತು ವಿವಿಪ್ಯಾಟ್ ಪರಿಶೀಲಿಸಬೇಕೆಂದು ಆದೇಶ ನೀಡಲಾಗಿದೆ.

ಅರ್ಜಿಯ ಕುರಿತು ಚುನಾವಣಾ ಆಯೋಗದೊಂದಿಗೆ ಮಾಹಿತಿ ಪಡೆಯಲಾಗಿದ್ದು, ನಮಗೆ ಇವಿಎಂ ಗಳು ನೀಡುವ ಫಲಿತಾಂಶದ ಬಗ್ಗೆ ಯಾವುದೇ ಸಂದೇಹ ಇಲ್ಲ. ಆದರೆ ಪರಿಶೀಲನೆಯ ಸಂಖ್ಯೆಗಳನ್ನು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ ಎಂದು ಪೀಠ ತಿಳಿಸಿದೆ.

ಇವಿಎಂ ಬಳಕೆಯ ಕುರಿತ ಅರ್ಜಿ ವಿಚಾರಣೆ ವೇಳೆ ಪ್ರತಿ ಚುನಾವಣಾ ಕ್ಷೇತ್ರದ ಶೇ.50 ರಷ್ಟು ಇವಿಎಂ ಗಳನ್ನು ವಿವಿಪ್ಯಾಟ್ ನೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿತ್ತು. ಈ ಮನವಿ ಆಯೋಗ ಶೇ.50 ರಷ್ಟು ಮತ ಎಣಿಕೆ ನಡೆಸಿದರೆ ಫಲಿತಾಂಶ ಪ್ರಕಟಿಸಲು 5-6 ದಿನ ಬೇಕಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ