ಬೆಂಗಳೂರು, ಏ.8-ಮಿಲಿಟರಿ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಅಪರಾಧ ಎಸಗಿದ್ದು, ಇದಕ್ಕೆ ಸಣ್ಣ ಪ್ರಮಾಣದ ಎಚ್ಚರಿಕೆ ನೀಡಿ ಬಿಟ್ಟುಬಿಡುವ ಬದಲು ಅವರನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸುವಂತಹ ಕಠಿಣ ನಿರ್ಧಾರವನ್ನು ಭಾರತ ಚುನಾವಣಾ ಆಯೋಗ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿಂದು ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಮಾತು-ಮಂಥನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣಾ ವಿಷಯಗಳನ್ನು ಚುನಾವಣಾ ಪ್ರಚಾರ ವಿಷಯಗಳನ್ನಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಐದು ಬಾರಿ ಯುದ್ಧ ಗೆದ್ದಿದ್ದೇವೆ. ಯುದ್ಧದ ವಿಷಯ ಮುಂದಿಟ್ಟುಕೊಂಡು ಹಿಂದಿನ ಯಾವ ಪ್ರಧಾನಿಯೂ ಮತ ಕೇಳಿರಲಿಲ್ಲ.ಮೋದಿ ಬಿಜೆಪಿ ಬಾವುಟ ಮತ್ತು ಧ್ವಜದ ಜೊತೆ ಮಿಲಿಟರಿ ಸಮವಸ್ತ್ರ ಧರಸಿ ಬೈಕ್ ರ್ಯಾಲಿ ಮೂಲಕ ಪ್ರಚಾರ ಮಾಡಿದ್ದಾರೆ.ಇದು ಕೂಡ ದೇಶದ್ರೋಹದ ಕೆಲಸವಾಗಿದ್ದು, ಆಯೋಗ ಚುನಾವಣಾ ಆಯೋಗ ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ಮೋದಿ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಮೋದಿ ಮತ ಯಾಚಿಸುತ್ತಿಲ್ಲ ಎಂದು ಲೇವಡಿ ಮಾಡಿದರು.
ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ, ಮನಮೋಹನ್ಸಿಂಗ್, ರಕ್ಷಣಾ ಸಚಿವರಾಗಿದ್ದ ಶರದ್ ಪವಾರ್ ಕೂಡಾ ಮಿಲಿಟರಿ ಸಮವಸ್ತ್ರ ಧರಿಸಿದ್ದರಾದರೂ ಆ ಸಂದರ್ಭ ಬೇರೆ ಇತ್ತು ಎಂದು ವಾದಿಸಿದರು.
ಚುನಾವಣೆ ಘೋಷಣೆ ನಂತರ ಸಂವಿಧಾನಾತ್ಮಕ ಹುದ್ದೆ ಹೊಂದಿದವರು ಹಾಗೂ ರಾಜ್ಯಪಾಲರಾದ ಕಲ್ಯಾಣ್ ಸಿಂಗ್ ಅವರು ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡು, ಮೋದಿಗೆ ವೋಟು ಹಾಕಿ ಮತ್ತೆ ಪ್ರಧಾನಿ ಮಾಡಿ ಎಂದು ಹೇಳಿಕೆ ನೀಡುತ್ತಾರೆ.ಅದರ ವರದಿಯನ್ನು ಆಧರಿಸಿ ಆಯೋಗಕ್ಕೆ ದೂರು ನೀಡಲಾಗುತ್ತದೆ.
ಆಯೋಗ ರಾಷ್ಟ್ರಪತಿಗೆ ವರದಿ ನೀಡುತ್ತದೆ.ರಾಷ್ಟ್ರಪತಿ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಗೃಹ ಸಚಿವರಿಗೆ ಕಡತ ರವಾನಿಸುತ್ತಾರೆ. ಈ ರೀತಿ ಮಾಡುವ ಬದಲು ರಾಷ್ಟ್ರಪತಿಯವರು ರಾಜ್ಯಪಾಲ ಕಲ್ಯಾಣ ಸಿಂಗ್ರನ್ನು ಅಮಾನತು ಮಾಡಿ ರಾಷ್ಟ್ರದಲ್ಲಿ ಆರೋಗ್ಯಕರ ಚುನಾವಣೆ ನಡೆಯುತ್ತಿದೆ ಎಂದು ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.
ಮತ್ತೊಂದು ಪ್ರಕರಣವನ್ನು ಉಲ್ಲೇಖಿಸಿದ ಎಚ್.ಕೆ.ಪಾಟೀಲ ಅವರು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ದೇಶದ ಸೇನೆಯನ್ನು ಮೋದಿ ಸೇನೆ ಎಂದು ಕರೆಯುತ್ತಾರೆ. ಸೇನೆಯ ವಿಚಾರವನ್ನು ಬಳಸುವ ಮೂಲಕ ಆದಿತ್ಯನಾಥ್ ಆಯೋಗದ ಸೂಚನೆಯನ್ನು ಉಲ್ಲಂಘಿಸಿದ್ದಾರೆ.ಇದನ್ನು ದೇಶದ್ರೋಹಿ ಮಾಡಬಹುದೇ ಹೊರತು ದೇಶಪ್ರೇಮಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಂತೋಷದ ವಿಚಾರ ಎಂದರೆ ಆಯೋಗ ಇದನ್ನು ಸ್ವಯಂ ಪ್ರೇರಿತವಾಗಿ ಗಮನಿಸಿದೆಯಾದರೂ ಸರಿಯಾದ ಕ್ರಮ ಕೈಗೊಳ್ಳಲಿಲ್ಲ. ಎಚ್ಚರಿಕೆ ಕೊಟ್ಟು ಬಿಟ್ಟು ಸುಮ್ಮನಾಗಿದೆ.ಕೂಡಲೆ ಆಯೋಗ ಯೋಗಿ ಆದಿತ್ಯನಾಥ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಕಾಂಗ್ರೆಸ ಚುನಾವಣಾ ಪ್ರಣಾಳಿಕೆ ಬಗ್ಗೆ ಹೇಳಿಕೆ ನೀಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಚಾರ ಸಮಿತಿ ಮಹತ್ವದ ಜವಾಬ್ದಾರಿ.ಪಕ್ಷ ನಾಯಕರನ್ನು ಗುರುತಿಸಿ ಗೌರವಯುತ ಹುದ್ದೆ ಕೊಡುತ್ತಿದೆ, ಎಲ್ಲರಿಗೂ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಸ್ಥಾನ ಕೊಡಲಾಗುವುದಿಲ್ಲ ಎಂದರು.
ಮುಖ್ಯಮಂತ್ರಿ ಸ್ಥಾನ ನಿಭಾಯಿಸಲು ಸಿದ್ಧ:
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಉತ್ತಮ ಫಲಿತಾಂಶ ಬಂದು, ಜನ ಹಾಗೂ ದೇವರು ಆಶೀರ್ವದಿಸಿದರೆ ಮುಖ್ಯಮಂತ್ರಿ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಹೇಳಿದ ಅವರು, ಪ್ರಚಾರ ಸಮಿತಿ ಜವಾಬ್ದಾರಿ ಸಚಿವ ಸ್ಥಾನಕ್ಕಿಂತಲೂ ದೊಡ್ಡದು ಎಂದು ಪಾಟೀಲ್ ಹೇಳಿದರು.
ಮಂಡ್ಯ, ಮೈಸೂರಿನಲ್ಲಿ ಮೈತ್ರಿ ಕುರಿತ ಗೊಂದಲಗಳನ್ನು ಸಿದ್ದರಾಮಯ್ಯ ಬಗೆ ಹರಿಸಿದ್ದಾರೆ.ಒಂದಿಬ್ಬರು ಪಕ್ಷ ವಿರುದ್ಧವಾಗಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಸಂಕಲ್ಪ ಪ್ರಣಾಳಿಕೆಗೆ ಅರ್ಥವಿಲ್ಲ ಎಂದು ಟೀಕಿಸಿದರು.
ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಬಿಜೆಪಿ ಕುತಂತ್ರ ಫಲಿಸಲ್ಲ. ಜೆಡಿಎಸ್ ಕಾಂಗ್ರೆಸ್ ಮೈತ್ರಿಯಲ್ಲಿ ಆರಂಭದಲ್ಲಿ ಒಂದಷ್ಟು ತೊಡಕುಗಳಿವೆ.
ಆದರೆ ಎಲ್ಲವೂ ಸರಿ ಹೋದರೆ ಮುಂದೆ ಎರಡು ಪಕ್ಷಕ್ಕೆ ಲಾಭವಾಗಲಿದೆ ಎಂದು ಹೇಳಿದರು.
ಪ್ರೆಸ್ಕ್ಲಬ್ನ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನಕಾರ್ಯದರ್ಶಿ ಕಿರಣ, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಈ ಸಂದರ್ಭದಲ್ಲಿ ಹಾಜರಿದ್ದರು.