ನೀರಿನ ಅಭಾವ ತಪ್ಪಿಸಲು ಜಲಶಕ್ತಿ ಮಂತ್ರಾಲಯ-ಪ್ರಧಾನಿ ಮೋದಿ

ಬೆಂಗಳೂರು,ಏ.8-ಭವಿಷ್ಯದಲ್ಲಿ ಉಂಟಾಗುವ ನೀರಿನ ಹಾಹಾಕಾರ ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ಜಲಶಕ್ತಿ ಮಂತ್ರಾಲಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದರು.

ಸಂಕಲ್ಪ ಪತ್ರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಅವರು, ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದರ ಜೊತೆಗೆ ನೀರಿನ ಅಭಾವ ತಪ್ಪಿಸಲು ಜಲಶಕ್ತಿ ಮಂತ್ರಾಲಯ ರೂಪಿಸಲಾಗುವುದು ಎಂದರು.

ನೀರಿನ ಭವಣೆ ಕುರಿತಂತೆ ದೇಶದ ಸಾವಿರಾರು ಮಂದಿ ನನಗೆ ದೂರು ಸಲ್ಲಿಸಿದ್ದಾರೆ ಜೊತೆಗೆ ತಮಿಳುನಾಡಿನ ಭೇಟಿ ಸಂದರ್ಭದಲ್ಲಿ ನೀರಿನ ಅಭಾವವನ್ನು ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ಜಲಶಕ್ತಿ ಮಂತ್ರಾಲಯ ಸ್ಥಾಪಿಸುವ ತೀರ್ಮಾನ ಕೈಗೊಂಡಿದ್ದೇನೆ ಎಂದು ಮೋದಿ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲಿ 75 ಭರವಸೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ದೇಶದ ಹಿಂದುಳಿದ ವರ್ಗದವರನ್ನು ಕೇಂದ್ರೀಕರಿಸಿ ಬಿಜೆಪಿ ಪ್ರಣಾಳಿಕೆ ಸಿದ್ದಪಡಿಸಿದೆ.

ಉತ್ತಮ ಆಡಳಿತ ನೀಡಬೇಕು ಎನ್ನುವುದೇ ಬಿಜೆಪಿ ಮಂತ್ರ. ಒನ್ ವಿಷನ್, ಒನ್ ಡೈರೆಕ್ಷನ್‍ನಂತೆ ಕೆಲಸ ಮಾಡುತ್ತೇವೆ. ನಾವು ಏನು ಮಾಡಿದ್ದೇವೆ ಎಂಬುದನ್ನು 75 ವರ್ಷ ಪೂರೈಸುವ 2022ರೊಳಗೆ ದೇಶದಲ್ಲಿ ಐತಿಹಾಸಿಕ ಬದಲಾವಣೆ ತರುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಇದುವರೆಗೂ ಪರಿಸರ ಮಾಲಿನ್ಯದ ಬಗ್ಗೆ ಮಾತ್ರ ಮಾತನಾಡುತ್ತಿದ್ದರು.ಕಳೆದ 5 ವರ್ಷಗಳಲ್ಲಿ ಸ್ವಚ್ಛತೆ ಬಗ್ಗೆ ಮಾತನಾಡುತ್ತಿದ್ದಾರೆ. ಸ್ವಚ್ಛತೆ ಕಾಪಾಡುವುದು ಜನಾಂದೋಲನವಾದರೆ ಭವಿಷ್ಯದಲ್ಲಿ ಸ್ವಚ್ಛತ ಭಾರತ ನಿರ್ಮಾಣ ಸಾಧ್ಯ ಎಂದು ಅವರು ವಿವರಿಸಿದರು.

ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಾವು ಕೈಗೊಂಡ ಕ್ರಮಗಳಿಂದ ಆಡಳಿತದಲ್ಲಿ ಸುಧಾರಣೆ ಕಂಡುಬಂದಿದೆ.ಗುಡ್ ಗೌರ್ನೆನ್ಸ್ ಮಿನಿಮಮ್ ಗೌರ್ಮೆಂಟ್ ಮೂಲಕ ಮುಂದಿನ 5 ವರ್ಷಗಳಲ್ಲಿ ಬಲಿಷ್ಠ ಭಾರತ ನಿರ್ಮಾಣದ ಗುರಿಯೊಂದಿಗೆ ಬಿಜೆಪಿ ಕೆಲಸ ಮಾಡಲಿದೆ ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ಬಂದು 100 ವರ್ಷ ಸಲ್ಲುವ 2047ರ ವೇಳೆಗೆ ಇಡೀ ವಿಶ್ವದಲ್ಲೇ ಭಾರತವನ್ನು ಮುಂದುವರೆದ ರಾಷ್ಟ್ರವನ್ನಾಗಿಸಲು ಸಂಕಲ್ಪ ಮಾಡಲಾಗಿದೆ ಎಂದು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ