ಬಾಗಲಕೋಟೆ,ಏ.8- ಜೆಡಿಎಸ್ ಗೆಲ್ಲಿಸಲು ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಗಿಸಿದ್ದಾರೆ.ಈಗ ಜೆಡಿಎಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎದುರಾದ ಚುನಾವಣೆಯಲ್ಲಿ ಮತ್ತೆ ನಾನೇ ಸಿಎಂ ಎಂದು ಹೇಳುತ್ತಿದ್ದರು.ಆಗ ಅವರ ಪಕ್ಷ 78ಕ್ಕೆ ಇಳಿದೋಯ್ತು.ಈಗ ಜೆಡಿಎಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ.ಚಾಮುಂಡೇಶ್ವರಿಯಲ್ಲಿ ನನ್ನನ್ನು ಸೋಲಿಸಿದ್ರು ಅಂತಾರೆ.ಪರಮೇಶ್ವರ್ ಅವರನ್ನು ಕೊರಟಗೆರೆಯಲ್ಲಿ ಸೋಲಿಸಿದ್ರು. ಅವರು ಗೆಲ್ಲೋದಕ್ಕೆ ಬಿಡ್ತಾರಾ ?ಸ್ನೇಹ, ಮೈತ್ರಿ ಅನ್ನೋದು ಕಾಂಗ್ರೆಸ್ಸಿಗೆ ಗೊತ್ತಿಲ್ಲ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗಲ್ಲ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದರು.
ಬಿಜೆಪಿ ಟಿಕೆಟ್ ಆರ್ಎಸ್ಎಸ್ ಮಾರಾಟ ಮಾಡಿದೆ ಎಂಬ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಅವರು, ದಿನೇಶ್ ಗುಂಡೂರಾವ್ ಅವರಿಗೆ ಮತಿಭ್ರಮಣೆಯಾಗಿದೆ. ಆರ್ಎಸ್ಎಸ್ ಪರಿಕಲ್ಪನೆ ಅವರಿಗಿಲ್ಲ. ರಾಷ್ಟ್ರದಲ್ಲಿ ಯುವಕರಿಗೆ ರಾಷ್ಟ್ರಭಕ್ತಿ ಕಲಿಸುವ ಪವಿತ್ರ ಸಂಸ್ಥೆ.ಆರ್ಎಸ್ಎಸ್ ಹಿಂದೂತ್ವದ ಬಗ್ಗೆ ಹೇಳುತ್ತದೆ. ಇದು ದಿನೇಶ್ ಗುಂಡೂರಾವ್ ಅವರಿಗೆ ಗೊತ್ತಿಲ್ಲ. ಆರ್ಎಸ್ಎಸ್ ನಮ್ಮ ಜೀವನದ ಪದ್ಧತಿ.ಕೀಳು ಮಟ್ಟದ ಪ್ರಚಾರ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಪುಲ್ವಾಮಾ ದಾಳಿ ಬಗ್ಗೆ 2 ವರ್ಷದ ಹಿಂದೆಯೇ ಗೊತ್ತಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ಗೊತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗಾದರೂ ಹೇಳಬಹುದಿತ್ತು. ಸೈನಿಕರ ಪ್ರಾಣಗಳಾದರೂ ಉಳಿಯುತ್ತಿತ್ತು ಎಂದರು.
ನಾಳೆ ಐಟಿ ರೈಡ್ ಮಾಡ್ತಾರೆ ಎಂದು ಸಿಎಂ ಹೇಳುತ್ತಾರೆ.ಐಟಿ ರೈಡ್ನಲ್ಲಿ ಏನೂ ಸಿಕ್ಕಿಲ್ಲ ಎನ್ನುತ್ತಾರೆ.ಆದರೆ ಕೋಟ್ಯಂತರ ರೂ. ಹಣ ಸಿಕ್ಕಿದೆ ಎಂದು ಆರೋಪಿಸಿದರು.