ಪ್ರಧಾನಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ

ಬೆಂಗಳೂರು, ಏ,7-ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ.

ರಾಜ್ಯದ ಸಣ್ಣ ಹಾಗೂ ಅತಿ ಸಣ್ಣ ರೈತರ ಪಟ್ಟಿಯನ್ನು ಆಧಾರ್ ಸಂಖ್ಯೆ ಆಧಾರದ ಮೇಲೆ ಪಿ.ಎಂ.ಕಿಸಾನ್ ಯೋಜನೆಗಾಗಿ ತಯಾರಿಸಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ.

ಪಿ.ಎಂ.ಕಿಸಾನ್ ಹಾಗೂ ಇತರೆ ಯೋಜನೆಯನ್ನು ಸುಗಮವಾಗಿ, ಪರಿಣಾಮಕಾರಿಯಾಗಿ ಅರ್ಹ ರೈತರಿಗೆ ತಲುಪಿಸಲು ಆಧಾರ್ ಸಂಖ್ಯೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಆಧಾರ್ ಸಂಖ್ಯೆ ಮೂಲಕ ಗುರುತಿನ ದೃಢೀಕರಣ ಪಡೆಯುವಂತೆ ರಾಜ್ಯ ಕಂದಾಯ ಇಲಾಖೆ ಸೂಚಿಸಿದೆ.

ಇದುವರೆಗೂ ಆಧಾರ್ ನೋಂದಣಿ ಮಾಡಿಸದವರು ಆಧಾರ್ ಸಂಖ್ಯೆಗಾಗಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿದ್ದಕ್ಕೆ ಅರ್ಜಿ ನೋಂದಾಯಿತ ಗುರುತಿನ ಸಂಖ್ಯೆಯನ್ನು ನೀಡುವಂತೆ ಕಂದಾಯ ಇಲಾಖೆ ರೈತರಿಗೆ ನಿರ್ದೇಶಿಸಿದೆ.

ಪಿ.ಎಂ.ಕಿಸಾನ್ ಹಾಗೂ ಸರ್ಕಾರದ ಇತರೆ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವವರು ಕಡ್ಡಾಯವಾಗಿ ನಿಯಮಗಳ ಪ್ರಕಾರ ಆಧಾರ್ ಸಂಖ್ಯೆ ಮೂಲಕ ತಮ್ಮ ಗುರುತನ್ನು ದೃಢೀಕರಿಸಬೇಕು.ಪಿ.ಎಂ.ಕಿಸಾನ್ ಹಾಗೂ ಇತರೆ ಯೋಜನೆಗಳು ಸಂಪೂರ್ಣವಾಗಿ ಜಾರಿಗೆ ಬರುವವರೆಗೂ ನಿಗದಿಪಡಿಸಿದಂತೆ ಕಂದಾಯ ಇಲಾಖೆಯ ಡಾಟಾ ಬೇಸ್‍ನಲ್ಲಿ ಆಧಾರ್‍ಗೆ ಸಂಬಂಧಿಸಿದ ಮಾಹಿತಿಯನ್ನು ಇಟ್ಟುಕೊಳ್ಳುವುದಾಗಿ ಕಂದಾಯ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಆಧಾರ್ ಸಂಖ್ಯೆಯನ್ನು ಇದುವರೆಗೂ ಹೊಂದಿಲ್ಲದವರು ಪಡಿತರ ಚೀಟಿ ಅಥವಾ ಪರ್ಯಾಯ ಪದ್ಧತಿ ಮೂಲಕ ತಮ್ಮ ಗುರುತನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ