ಪ್ರಮುಖ ಪಕ್ಷಗಳಲ್ಲಿ ಮುಂದುವರೆದ ಭಿನ್ನಮತ

ಬೆಂಗಳೂರು,ಏ.7- ದೋಸ್ತಿ ಪಕ್ಷಗಳ ನಾಯಕರ ನಡುವೆ ಮುನಿಸು ಮುಂದುವರೆದಿರುವ ಬೆನ್ನಲ್ಲೇ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಪ್ರಮುಖ ಎಲ್ಲಾ ಪಕ್ಷಗಳಲ್ಲಿ ಒಳಹೊಡೆತದ ಭೀತಿ ಕಾಡುತ್ತಿದೆ.

ಈ ನಡುವೆಯೇ 2ನೇ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದೆ. ಇದೇ 23ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ,ದೋಸ್ತಿ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.

ಟಿಕೆಟ್ ಕೈತಪ್ಪಿದವರು, ಎದುರಾಳಿಗೆ ಏಕೆ ಬೆಂಬಲ ಸೂಚಿಸಬೇಕೆಂಬ ಮನಸ್ಥಿತಿಯಲ್ಲಿರುವವರು, ಹಳೆಯ ಜಿದ್ದು ಇತ್ಯಾದಿ ಕಾರಣಗಳಿಂದಾಗಿ ಅಧಿಕೃತ ಅಭ್ಯರ್ಥಿಗಳನ್ನೇ ಸೋಲಿಸಲು ಒಳಗೊಳಗೆ ಖೆಡ್ಡಾ ತೋಡುತ್ತಿರುವುದು ಮೂರು ಪಕ್ಷಗಳಲ್ಲೂ ಕಂಡುಬಂದಿದೆ.

ಹೀಗಾಗಿ ದೋಸ್ತಿ ಪಕ್ಷ ಹಾಗೂ ಬಿಜೆಪಿ ಎಲ್ಲರಿಗೂ ಒಳಹೊಡೆತದ ಭೀತಿ ಆವರಿಸಿದ್ದು, ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಇಲ್ಲವೋ ಎಂಬ ಆತಂಕ ಕಾಡುತ್ತಿದೆ.

ಇತ್ತ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಉಂಟಾಗಿರುವ ಭಿನ್ನಮತ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದರಲ್ಲೂ ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸ್ಥಳೀಯ ನಾಯಕರಲ್ಲಿ ಉಂಟಾಗಿರುವ ಗೊಂದಲ ಮುಂದುವರೆಯುತ್ತಲೇ ಇದೆ.

ಸ್ಥಳೀಯ ನಾಯಕರನ್ನು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಲು ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರಾದರೂ ಪ್ರತಿಷ್ಠೆಯಿಂದಾಗಿ ಯಾರೊಬ್ಬರು ತಮ್ಮ ತಮ್ಮ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ.ಇದು ರಾಜ್ಯ ನಾಯಕರನ್ನು ಚಿಂತೆಗೀಡು ಮಾಡಿದೆ.

ನಾಮಪತ್ರ ಸಲ್ಲಿಕೆ: ಇದೇ 23ರಂದು ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಾದ ದಾವಣಗೆರೆ , ಧಾರವಾಡ, ಬೆಳಗಾವಿ, ರಾಯಚೂರು, ವಿಜಾಪುರ, ಕಾರವಾರ ಸೇರಿದಂತೆ ಅನೇಕ ಕಡೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದರೇಶ್ವರ್(ಬಿಜೆಪಿ), ಎಚ್.ಬಿ.ನಂಜಪ್ಪ (ಕಾಂಗ್ರೆಸ್), ಉತ್ತರಕನ್ನಡದಲ್ಲಿ ಆನಂದ್ ಅಸ್ನೋಟಿಕರ್(ಜೆಡಿಎಸ್), ವಿಜಾಪುರದಲ್ಲಿ ಸುನಿತಾ ಚೌವಾಣ್(ಜೆಡಿಎಸ್), ಬೆಳಗಾವಿಯಲ್ಲಿ ವಿ.ಸಾಧುನವರ್(ಕಾಂಗ್ರೆಸ್), ರಾಯಚೂರಿನಲ್ಲಿ ಬಿ.ವಿ.ನಾಯಕ್(ಕಾಂಗ್ರೆಸ್), ರಾಜ ಅಮರೇಶ್ ನಾಯಕ್(ಬಿಜೆಪಿ), ಬಾಗಲಕೋಟೆಯಲ್ಲಿ ಪಿ.ಸಿ.ಗದ್ದಿಗೌಡರ್(ಬಿಜೆಪಿ), ಧಾರವಾಡದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಅನೇಕರು ಭಾರೀ ಸಂಖ್ಯೆಯ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಮುಂದುವರೆದ ಜಂಗೀಕುಸ್ತಿ:
ಬಿಜೆಪಿಯನ್ನು ಈ ಚುನಾವಣೆಯಲ್ಲಿ ಕಟ್ಟಿ ಹಾಕಲು ಹೊರಟಿದ್ದ ಕಾಂಗ್ರೆಸ್ ಜೆಡಿಎಸ್‍ಲೆಕ್ಕಾಚಾರಗಳು ತಲೆಕೆಳಗಾಗಿವೆ. ಜಿಲ್ಲಾ ಮಟ್ಟದಲ್ಲಿ ಹೊಂದಾಣಿಕೆಯಾಗುತ್ತಿಲ್ಲ.

ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ನೀವು ನಮ್ಮ ವಿರುದ ಯಾವುದೇ ಶಿಸ್ತು ಕ್ರಮ ಕೈಗೊಂಡರೂ ಚಿಂತೆಯಿಲ್ಲ. ನಾವು ಮಾತ್ರ ಸುಮಲತಾ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಪಕ್ಷದ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ.

ಅಲ್ಲದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಗಳನ್ನು ಕೂಗಿದರು. ಕೋಲಾರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುವುದಿಲ್ಲ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಬೆಂಬಲಿಗರು ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್‍ನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.

ಸಚಿವ ಆರ್.ವಿ.ದೇಶಪಾಂಡೆ ಮತ್ತು ಅವರ ಬೆಂಬಲಿಗರು ಈಗಲೂ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸೂಚಿಸುತ್ತಿಲ್ಲ. ಧಾರವಾಡದಲ್ಲಿಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಐ.ಜಿ.ಸನದಿ ಹಾಗೂ ಅವರ ಬೆಂಬಲಿಗರು ಸಹ ಮುನಿಸಿಕೊಂಡಿದ್ದಾರೆ.

ಕೊನೆ ಕ್ಷಣದಲ್ಲಿ ಹೈಕಮಾಂಡ್ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಸನದಿ ಸೇರಿದಂತೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿರುವುದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಗಣಿಜಿಲ್ಲೆ ಬಳ್ಳಾರಿಯಲ್ಲಂತೂ ಕಾಂಗ್ರೆಸ್ ಪರಿಸ್ಥಿತಿಯಂತೂ ದಿನದಿಂದ ದಿನಕ್ಕೆ ಅಯೋಮಯ ಎನ್ನುವಂತಾಗಿದೆ. ಶಾಸಕರಾದ ಆನಂದ್ ಸಿಂಗ್, ಭೀಮಾನಾಯಕ್ ಸೇರಿದಂತೆ ಜಿಲ್ಲಾ ಮುಖಂಡರ ನಡುವೆ ಒಗ್ಗಟ್ಟು ಕಾಣುತ್ತಿಲ್ಲ.

ಬಿಜೆಪಿಯಲ್ಲಿ ಬಿಕ್ಕಟ್ಟು:
ಬಿಜೆಪಿಯಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಮೇಲ್ನೋಟಕ್ಕೆ ವರಿಷ್ಠರ ಮಧ್ಯಪ್ರವೇಶದಿಂದ ಎಲ್ಲವೂ ಸರಿ ಹೋಗಿದೆ ಅಂದುಕೊಂಡಿದ್ದರೂ ಮುನಿಸಿಕೊಂಡಿರುವ ನಾಯಕರ ಕೋಪತಾಪ ಈಗಲೂ ಆರಿಲ್ಲ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇರುವುರಿಂದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಮುನಿಸಿಕೊಂಡಿರುವ ನಾಯಕರ ಮನವೊಲಿಸುತ್ತಿದ್ದಾರೆ.

ಚಿಕ್ಕೋಡಿಯಲ್ಲಿ ಕತ್ತಿ ಸಹೋದರರು ಭಿನ್ನಮತವಿಲ್ಲ ಎಂದು ಹೇಳುತ್ತಾರಾದರೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ನಾಮಪತ್ರ ಸಲ್ಲಿಸುವ ವೇಳೆ ರಮೇಶ್ ಕತ್ತಿ ಗೈರು ಆಗಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸಾರಿ ಹೇಳುತ್ತಿದೆ.

ಇದೇ ರೀತಿ ಅನೇಕ ಜಿಲ್ಲೆಗಳಲ್ಲಿ ಒಳ ಹೊಡೆತದ ಭೀತಿ ಎಲ್ಲ ಪಕ್ಷಗಳಲ್ಲೂ ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ