ಹಾಸನ, ಎ.7- ಸಚಿವರಾಗಿದ್ದಾಗ ಎ.ಮಂಜು ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಅವರಿಗೆ ತತ್ವ, ಸಿದ್ದಾಂತ, ಬದ್ಧತೆ ಇಲ್ಲ ಎಂದು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು.
ಅರಕಲಗೂಡಿನಲ್ಲಿಂದು ಭರ್ಜರಿ ರೋಡ್ ಷೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಎ.ಮಂಜು ಸಚಿವರಾಗಿದ್ದ ವೇಳೆ ಕಟ್ಟಡಗಳಿಗೆ ಕನಿಷ್ಠ ಬಣ್ಣ ಹಚ್ಚಿಸುವ ಕೆಲಸವನ್ನೂ ಮಾಡಲಿಲ್ಲ. ಅವರಿಂದ ಯಾವುದೇ ಕೆಲಸ ಆಗಿಲ್ಲ. ಅವರಿಗೆ ಕೇವಲ ಅಧಿಕಾರ ಬೇಕಷ್ಟೆ ಎಂದು ಜರಿದರು.
ಬಿಜೆಪಿ ಸೇರಿದರೆ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದಾರೆ.ಅದು ನಿಜವಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಸಚಿವರಾಗಿದ್ದಾಗ ಯಾವಾಗಲೋ ಕ್ಷೇತ್ರಕ್ಕೆ ಬರುತ್ತಿದ್ದರು, ಸೋತ ನಂತರ ಇತ್ತ ತಲೆ ಹಾಕಲಿಲ್ಲ ಎಂದು ಆರೋಪಿಸಿದ ಪ್ರಜ್ವಲ್ ನೀವು ಅದೆಷ್ಟು ಮಂದಿ ವೀರಶೈವ ಲಿಂಗಾಯತ ನಾಯಕರನ್ನು ಬೆಳೆಸಿದಿರಿ ಎಂದು ಖಾರವಾಗಿ ಪ್ರಶ್ನಿಸಿ, ವೀರಶೈವ ಲಿಂಗಾಯತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಹೇಳಿದರು.
ಮೋದಿ ವಿರುದ್ಧವೂ ವಾಗ್ದಾಳಿ: ಅಧಿಕಾರಕ್ಕೆ ಬಂದ ಕೂಡಲೆ ನಿರುದ್ಯೋಗ ನಿರ್ಮೂಲನೆ ಮಾಡುವುದಾಗಿ ಹೇಳಿದ ಪ್ರಧಾನಿ ಮೋದಿಯವರು ನಂತರ ಮಾತಿಗೆ ತಪ್ಪಿದ್ದಾರೆ ಎಂದು ಇದೇ ವೇಳೆ ಪ್ರಜ್ವಲ್ರೇವಣ್ಣ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಾರ್ವಜನಿಕರ ಖಾತೆಗೆ 15ಲಕ್ಷ ಹಾಕುವುದಾಗಿ ಹೇಳಿದ್ದಿರಿ, ರೈತರ ಖಾತೆಗೂ ಹಣ ಹಾಕುವುದಾಗಿ ಹೇಳಿದಿರಿ, ಎಲ್ಲಿ ಆ ಹಣ ಎಂದು ಪ್ರಶ್ನಿಸಿದರು. ಕಪ್ಪುಹಣ ತರುವ ಕೆಲಸವಾಗಲಿಲ್ಲ ಎಂದು ದೂರಿದರು.
ಫಸಲ್ಬೀಮಾ ಯೋಜನೆ ಸಂಪೂರ್ಣ ವಿಫಲವಾಗಿದೆ.ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಪ್ರಜ್ವಲ್ ಹೇಳಿದರು.
ಶಾಸಕ ಎ.ಟಿ.ರಾಮಸ್ವಾಮಿ ಮತ್ತಿತರ ಮುಖಂಡರು ಪ್ರಜ್ವಲ್ ಪ್ರಚಾರಕ್ಕೆ ಸಾಥ್ ನೀಡಿದರು.