ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಏಕೈಕ ಪಕ್ಷ ಬಿಜೆಪಿ ಖಂಡ್ರೆ ಹೇಳಿಕೆಗೆ ಖೂಬಾ ತಿರುಗೇಟು

ಬೀದರ್: ನಾನು ಅಯೋಗ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾಡಿದ ಆರೋಪಕ್ಕೆ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಭಗವಂತ ಖೂಬಾ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದ ಗಣೇಶ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಯಾರು ಯೋಗ್ಯರು? ಯಾರು ಅಯೋಗ್ಯರು ಎಂಬುದು ಅವರವರು ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ಗೊತ್ತಾಗುತ್ತದೆ. ನಿಮ್ಮ ಸುಳ್ಳಿನ ಆರೋಪಕ್ಕೆ ಕ್ಷೇತ್ರದ ಜನರೇ ಸೂಕ್ತ ಪಾಠ ಕಲಿಸುತ್ತಾರೆ ಎಂದರು.

ಗ್ರಾಪಂ ಸದಸ್ಯನಾಗಲೂ ನಾನು ಅರ್ಹರಲ್ಲ ಎಂದು ಖಂಡ್ರೆ ಹೇಳಿದ್ದು ಹಾಸ್ಯಾಸ್ಪದ. ನನ್ನಂಥ ಸಾಮಾನ್ಯ ಕಾರ್ಯಕರ್ತರಿಗೆ ಪಕ್ಷ ಗುರುತಿಸಿ ಎಂಪಿ ಟಿಕೆಟ್ ನೀಡುತ್ತದೆ. ಜನತೆ ಆಯ್ಕೆ ಮಾಡುತ್ತಾರೆ. ಸಾಮಾನ್ಯ ಕಾರ್ಯಕರ್ತರಿಗೆ ಇಂತಹ ಅವಕಾಶ ನೀಡುವ ಏಕೈಕ ಪಕ್ಷ ಬಿಜೆಪಿ. ಏನೇನೂ ಕೊಡುಗೆ ನೀಡದವರು ನನ್ನ ಸಾಧನೆ ಪ್ರಶ್ನಿಸುವ ನೈತಿಕತೆ ಸಹ ಹೊಂದಿಲ್ಲ. ಬೀದರ್-ಕಲಬುರಗಿ ರೈಲ್ವೆ ಮಾರ್ಗ ಪೂರ್ಣಗೊಳಿಸಿದ್ದು ನಮ್ಮ ಸರ್ಕಾರ. ಯುಪಿಎ ಅವಧಿಯಲ್ಲಿ ಕೇವಲ ಶೇ. 38 ರಷ್ಟು ಕೆಲಸವಾಗಿತ್ತು. ನಾವು ಶೇ. 62ರಷ್ಟು ಕೆಲಸ ಮುಗಿಸಿದ್ದೇವೆ . ನೀವು ಭಾಲ್ಕಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದು ನಾನು ಎಂಬುದು ಮರೆಯದಿರಿ ಎಂದು ಖಂಡ್ರೆಗೆ ಟಾಂಗ್ ನೀಡಿದರು. ಕಳೆದ ಸಲ ನಿಮ್ಮ ಪಕ್ಷದ ಸಂಸದರು, ಕೇಂದ್ರದಲ್ಲೂ ನಿಮ್ಮ ಸರ್ಕಾರ ಇದ್ದರೂ ರೈಲ್ವೆ ಸಮಯವೇ ಬದಲಿಸಲು ಆಗಿಲ್ಲ. ಗ್ರಾಪಂ ಸದಸ್ಯನೂ ಆಗದ ನಾನು 13 ಹೊಸ ರೈಲು ಪ್ರಾರಂಭಿಸಿರುವೆ.

ಭಾಲ್ಕಿಯಿಂದ ಬೆಂಗಳೂರು, ಭಾಲ್ಕಿ-ಮುಂಬೈ, ಭಾಲ್ಕಿ-ಪಂಢರಪುರೆಕ್ಕೆ ರೈಲು ಸಂಚರಿಸುವಂತೆ ಮಾಡಿದ್ದು ನಾನು. ನಿಮ್ಮ ಕುಟುಂಬ 60 ವರ್ಷದಿಂದ ಜಿಲ್ಲೆಯ ರಾಜಕಾರಣ ಹಿಡಿತದಲ್ಲಿಟ್ಟುಕೊಂಡಿದೆ. ಸುದೀರ್ಘ ಅವಧಿ ರಾಜ್ಯ, ಕೇಂದ್ರದಲ್ಲಿ ನಿಮ್ಮ ಸರ್ಕಾರಗಳಿದ್ದವು. ಈ ಅವಧಿಯಲ್ಲಿ ಒಂದಾದರೂ ರಾಷ್ಟ್ರೀಯ ಹೆದ್ದಾರಿ ತರುವ ಯೋಗ್ಯತೆ ನಿಮಗಿದ್ದಿಲ್ಲ. ನಾನು 5 ವರ್ಷದಲ್ಲಿ 12 ಹೆದ್ದಾರಿ ಮಂಜೂರಿ ಮಾಡಿಸಿರುವೆ.

ನಿಮ್ಮ ಭಾಲ್ಕಿ ಪಟ್ಟಣದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಂದು ಶಿಲಾನ್ಯಾಸ ಮಾಡಿದ್ದು ಮರೆತಿರುವಿರಾ? ಎಂದು ಪ್ರಶ್ನಿಸಿದರು. ಅಲ್ಲಲ್ಲಿ ಕಪ್ಪು ಕಲ್ಲಿನ ಗೋಡೆಗಳು ಕಟ್ಟಿದ್ದು ನಿಮ್ಮ ಕೊಡುಗೇನಾ ಎಂದು ಖೂಬಾ ಪ್ರಶ್ನಿಸಿದರು. ಲಿಂಗಾಯತರಿಗೂ ಖಂಡ್ರೆ ಅನ್ಯಾಯ ಮಾಡಿದ್ದಾರೆ. ಬಸವಕಲ್ಯಾಣ ನೂತನ ಅನುಭವ ಮಂಟಪಕ್ಕೆ ನಯಾ ಪೈಸೆ ಹಣ ಕೊಡಿಸಲು ಅವರಿಂದ ಆಗಿಲ್ಲ. ಸುಳ್ಳಿನ ಭರವಸೆ ನೀಡಿ ಸಮಾಜಕ್ಕೂ ಮೋಸ ಮಾಡಿದ್ದಾರೆ. ಇವರಿಗೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಮಾವೇಶ ಉದ್ಘಾಟಿಸಿ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕಳೆದ ಸಲಕ್ಕಿಂತ ಹತ್ತು ಪಟ್ಟು ಹೆಚ್ಚು ಮೋದಿ ಹವಾ ಈಗಿದೆ. ಈ ಅಲೆಯಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತೆ ಕೊಚ್ಚಿ ಹೋಗಲಿದೆ. ಈ ಸಲ ರಾಜ್ಯದಲ್ಲಿ 22, ದೇಶಾದ್ಯಂತ 300ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮತ್ತೆ ಮೋದಿ ಅವರಿಗೆ ಪ್ರಧಾನಿ ಮಾಡಲು ದೇಶದ ಜನತೆ ತೀರ್ಮಾನಿಸಿದ್ದು, ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ನಡೆಸಿದ ಯಡಿಯೂರಪ್ಪ, ದೇಶದ ಸುರಕ್ಷತೆಗಾಗಿ ಕಾಂಗ್ರೆಸ್ ಸೋಲಿಸಬೇಕಿದೆ. ಬೀದರ್, ಕಲಬುರಗಿ ಸೇರಿ ರಾಜ್ಯದ 22 ಸ್ಥಾನದಲ್ಲಿ ನಾವು ಗೆಲ್ಲಲಿದ್ದೇವೆ . ಚುನಾವಣೆ ಮುಗಿಯುತ್ತಿದ್ದಂತೆ ಮೈತ್ರಿ ಸರ್ಕಾರ ಬೀಳುವುದು ಪಕ್ಕಾ. ಮುಖಂಡರು, ಕಾರ್ಯಕರ್ತರು ದಿನವಿಡಿ ಕೆಲಸ ಮಾಡಬೇಕು. ಪ್ರತಿ ಬೂತ್‍ನಲ್ಲಿ ಶೇ. 70ರಷ್ಟು ಮತ ಬರುವಂತೆ ಶ್ರಮಿಸಬೇಕು. ಪಕ್ಷದ ತತ್ವ, ಸಿದ್ಧಾಂತಕ್ಕೆ ಒಪ್ಪಿ ಬರುವವರಿಗೆ ಕರೆದುಕೊಂಡು, ಅಭ್ಯರ್ಥಿ ಭಗವಂತ ಖೂಬಾ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವ ನಿಟ್ಟಿನಲ್ಲಿ ತಂತ್ರ ರೂಪಿಸುವಂತೆ ಸೂಚಿಸಿದರು.

ಶಾಸಕರಾದ ಪ್ರಭು ಚವ್ಹಾಣ್, ಸುಭಾಷ ಗುತ್ತೇದಾರ್, ಮಾಜಿ ಸಚಿವ ಸುನೀಲ ವಲ್ಯಾಪುರೆ, ಮಾಜಿ ಶಾಸಕರಾದ ಸುಭಾಷ ಕಲ್ಲೂರ್, ರಾಜೇಂದ್ರ ವರ್ಮಾ, ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಚುನಾವಣೆ ಪ್ರಭಾರಿ ಅಮರನಾಥ ಪಾಟೀಲ್, ಪ್ರಮುಖರಾದ ಡಿ.ಕೆ. ಸಿದ್ರಾಮ, ಸಂಜಯ್ ಪಟವಾರಿ, ಶಿವರಾಜ ಗಂದೆಗೆ, ಬಾಬು ವಾಲಿ, ಗುರುನಾಥ ಕೊಳ್ಳುರ್, ಬಸವರಾಜ ಪವಾರ, ಗುರುನಾಥ ಜ್ಯಾಂತಿಕರ್, ಎನ್.ಆರ್. ವರ್ಮಾ, ಬಾಬುರಾವ ಮದಕಟ್ಟಿ, ಬಸವರಾಜ ಆರ್ಯ, ಶಿವಾನಂದ ಮಂಠಾಳಕರ, ವಿಜಯಕುಮಾರ ಪಾಟೀಲ್ ಗಾದಗಿ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಸುಧೀರ ಕಾಡಾದಿ ಇತರರಿದ್ದರು. ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು.
===========================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ