ಮಂಡ್ಯ, ಏ.4-ರಾಷ್ಟ್ರದಲ್ಲಿಯೇ ಹೆಚ್ಚು ಗಮನ ಸೆಳೆಯುವ ಕ್ಷೇತ್ರವೆಂದರೆ ಮಂಡ್ಯ ಲೋಕಸಭಾ ಕ್ಷೇತ್ರ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಲಾಗಿದ್ದು, ಚುನಾವಣೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಸಕ್ಕರೆಯ ನಾಡು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. ಕಾಂಗ್ರೆಸ್ ಜನತಾಪಕ್ಷ, ಜೆಡಿಎಸ್ ಪಕ್ಷಗಳದ್ದೇ ಪ್ರಾಬಲ್ಯ ಇದುವರೆಗಿನ ಚುನಾವಣೆಗಳಲ್ಲಿ ಕಂಡುಬಂದಿದೆ.
ಪ್ರಸಕ್ತ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್.ಕೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ಅಂಬರೀಶ್ ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸುಮಲತಾ ಹಾಗೂ ನಿಖಿಲ್ ಸ್ಪರ್ಧೆ ಈ ಬಾರಿಯ ಚುನಾವಣೆಯ ಕಾವನ್ನು ಹೆಚ್ಚಿಸಿದೆ. ಆದರೆ ಮಂಡ್ಯಕ್ಷೇತ್ರ ಕಾವೇರಿ ವಿವಾದ ಹಾಗೂ ರೈತರ ವಿಚಾರದಲ್ಲಿ ಪದೇ ಪದೇ ರಾಷ್ಟ್ರದ ಗಮನವನ್ನು ಸೆಳೆಯುತ್ತಲೇ ಬಂದಿದೆ. ಹೀಗಾಗಿ ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ವಿಶಿಷ್ಟವಾದ ಸ್ಥಾನವಿದೆ.
ಜೀವನಾಡಿ ಕಾವೇರಿಯನ್ನೇ ಕ್ಷೇತ್ರದ ಜನರು ಅವಲಂಬಿಸಿದ್ದಾರೆ. ಕಬ್ಬು, ಭತ್ತ ಇಲ್ಲಿನ ಪ್ರಮುಖ ಬೆಳೆಗಳು.ಕೆಆರ್ಎಸ್ ಭರ್ತಿಯಾದರೆ ಮಂಡ್ಯದ ಬಹಳಷ್ಟು ಸಮಸ್ಯೆಗಳು ಬಗೆಹರಿದಂತೆ. ಒಂದು ವೇಳೆ ಮಳೆ ಅಭಾವದಿಂದ ಕೆಆರ್ಎಸ್ನಲ್ಲಿ ನೀರಿನ ಕೊರತೆ ಉಂಟಾದರೆ ನೆರೆ ರಾಜ್ಯದೊಂದಿಗೆ ಜಲ ವಿವಾದ ತಲೆದೋರುತ್ತದೆ.
ಆಗ ಇಡೀ ಜಿಲ್ಲೆಯ ಜನರು ಪಕ್ಷಭೇದ , ಭಿನ್ನಾಭಿಪ್ರಾಯ ಮರೆತು ನೀರಿಗಾಗಿ ಒಂದಾಗುತ್ತಾರೆ. ಅಷ್ಟೇ ಅಲ್ಲ, ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ಗಮನ ಸೆಳೆದು ಎಲ್ಲೆಡೆ ಬೆಂಬಲ ಪಡೆದಿರುವುದನ್ನು ಗಮನಿಸಬಹುದು.
ಕಾವೇರಿ ವಿಚಾರದಲ್ಲಿ ಭಿನ್ನ ಸ್ವರವಿಲ್ಲದ, ಇಡೀ ರಾಜ್ಯ ಒಂದಾಗುತ್ತದೆ. ಕಾವೇರಿ ಜಲವಿವಾದ ಇನ್ನು ಜೀವಂತವಾಗಿರುವುದರಿಂದ ಮಂಡ್ಯ ಪ್ರತಿನಿಧಿಸುವ ಜನಪ್ರತಿನಿಧಿ ಸಮರ್ಥರಾಗಿರಬೇಕು ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ, ರೈತರ ಸಮಸ್ಯೆಗಳ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆಯಾದಾಗ ಮಂಡ್ಯದ ಪ್ರಸ್ತಾಪವಾಗುತ್ತದೆ. ಹೀಗಾಗಿ ನೆರೆಹೊರೆ ರಾಜ್ಯಗಳಿಗೂ ಮಂಡ್ಯ ರಾಜಕೀಯದ ಬಗ್ಗೆ ಕುತೂಹಲ ಕೆರಳಿಸುತ್ತದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರ ಹೆಚ್ಚಿನ ಕುತೂಹಲವನ್ನು ರಾಜಕೀಯವಾಗಿ ಕೆರಳಿಸಿದ್ದು ಮಾತ್ರವಲ್ಲ, ಚುನಾವಣಾ ಪ್ರಚಾರದ ಕಾವು ಕೂಡ ಹೆಚ್ಚಾಗಿದೆ.
ಪ್ರತಿದಿನವೂ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇದೆ. ಚುನಾವಣಾ ಕಣದಲ್ಲಿ 22 ಮಂದಿ ಅಭ್ಯರ್ಥಿಗಳಿದ್ದರೂ ಹೆಚ್ಚು ಚರ್ಚೆಯಾಗುತ್ತಿರುವುದು ಸುಮಲತಾ ಮತ್ತು ನಿಖಿಲ್ ವಿಚಾರದಲ್ಲಿ ಮಾತ್ರ. ಈ ಕ್ಷೇತ್ರದ ಬಗ್ಗೆ ಹಲವು ರೀತಿಯ ಅಭಿಪ್ರಾಯ, ನಾನಾ ರೀತಿಯ ವ್ಯಾಖ್ಯಾನಗಳು ವ್ಯಕ್ತವಾಗುತ್ತಲೇ ಇದ್ದು, ಜನರ ಒಲವಿನ ಬಗ್ಗೆ ತೀವ್ರ ಕಾತರ, ಕುತೂಹಲ ಜನರಲ್ಲಿ ಉಂಟು ಮಾಡಿದೆ.
ನಿಖಿಲ್ ಮುಖ್ಯಮಂತ್ರಿ ಪುತ್ರ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಆಗಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಸಹಜವಾಗಿಯೇ ಹೆಚ್ಚಿನ ಪ್ರಚಾರ ಹಾಗೂ ಜನ ಬೆಂಬಲ ದೊರೆಯುತ್ತಿದೆ.
ಅದೇ ರೀತಿ ಸುಮಲತಾ ಅವರು ನಟಿಯಾಗಿದ್ದು, ಅಂಬರೀಶ್ ಅವರ ಪತ್ನಿಯಾಗಿರುವುದರಿಂದ ಅವರಿಗೂಕೂಡ ಅಷ್ಟೇ ಪ್ರಮಾಣದ ಪ್ರಚಾರ, ಜನಬೆಂಬಲ ಸಿಗುತ್ತಿದೆ.
ಸುಮಲತಾ ಅವರ ಪರವಾಗಿ ಚಿತ್ರ ನಟರು ಪ್ರಚಾರಕ್ಕಿಳಿದಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ಘೋಷಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೊಂಡಿದೆ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸಿದ್ದಾರೆ.ಸ್ವಾಭಿಮಾನಿಗಳು ಮತ್ತು ಪ್ರಜ್ಞಾವಂತ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಯಾರತ್ತ ಒಲವು ತೋರಲಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಮಂಡ್ಯ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಗೆದ್ದಿಲ್ಲ. ಕ್ಷೇತ್ರದ ಚುನಾವಣಾ ಇತಿಹಾಸವನ್ನು ನೋಡಿದರೂ ಕಾಂಗ್ರೆಸ್-ಜೆಡಿಎಸ್ ನವರೇ ಇದುವರೆಗೂ ಗೆದ್ದು ಬಂದಿದ್ದಾರೆ. ಕಳೆದ 1996ರಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ ಅವರು ಜೆಡಿಎಸ್ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು.
ನಂತರ 1998ರಲ್ಲಿ ನಟ ಅಂಬರೀಶ್ ಜೆಡಿಎಸ್ನಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶ ಮಾಡಿದ್ದರು. 1999ರಲ್ಲಿ ಜೆಡಿಎಸ್ ಬದಲಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಅಂಬರೀಶ್ ಅವರು ಚುನಾಯಿತರಾಗಿದ್ದರು.
2004ರ ಚುನಾವಣೆಯಲ್ಲೂ ಅಂಬರೀಶ್ ಅವರು ಚುನಾಯಿತರಾಗಿದ್ದರು. 2009ರಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದಿದ್ದರು. 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ನಟಿ ರಮ್ಯಾ ಕಾಂಗ್ರೆಸ್ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು.
2014ರಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಜೆಡಿಎಸ್ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಜೆಡಿಎಸ್ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ಆಗ ಇದೇ ರೀತಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿದ್ದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ 1689362 ಮತದಾರರಿದ್ದು, 845275 ಪುರುಷ, 843946 ಮಹಿಳಾ ಮತದಾರರು ಹಾಗೂ 141 ಇತರೆ ಮತದಾರರಿದ್ದಾರೆ. ತಾರಾ ರಂಗುಪಡೆದಿರುವ ಮಂಡ್ಯ ಕ್ಷೇತ್ರದ ಫಲಿತಾಂಶ ಎಲ್ಲರ ಕುತೂಹಲವನ್ನು ಕೆರಳಿಸಿದೆ.