ಬೆಂಗಳೂರು,ಏ.5- ದೋಸ್ತಿ ಪಕ್ಷಗಳ ನಾಯಕರ ನಡುವೆ ಮುನಿಸು ಮುಂದುವರೆದಿರುವ ಬೆನ್ನಲ್ಲೇ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಪ್ರಮುಖ ಎಲ್ಲಾ ಪಕ್ಷಗಳಲ್ಲಿ ಒಳಹೊಡೆತದ ಭೀತಿ ಕಾಡುತ್ತಿದೆ.
ಟಿಕೆಟ್ ಕೈತಪ್ಪಿದವರು, ಎದುರಾಳಿಗೆ ಏಕೆ ಬೆಂಬಲ ಸೂಚಿಸಬೇಕೆಂಬ ಮನಸ್ಥಿತಿ, ಹಳೆಯ ಜಿದ್ದು ಹಾಗೂ ಇತ್ಯಾದಿ ಕಾರಣಗಳಿಂದಾಗಿ ಅಧಿಕೃತ ಅಭ್ಯರ್ಥಿಗಳನ್ನೇ ಸೋಲಿಸಲು ಒಳಗೊಳಗೆ ಖೆಡ್ಡಾ ತೋಡುತ್ತಿರುವುದು ಮೂರು ಪಕ್ಷಗಳಲ್ಲೂ ಕಂಡುಬಂದಿದೆ.
ಹೀಗಾಗಿ ದೋಸ್ತಿ ಪಕ್ಷ ಹಾಗೂ ಬಿಜೆಪಿ ಎಲ್ಲರಿಗೂ ಒಳಹೊಡೆತದ ಭೀತಿ ಆವರಿಸಿದ್ದು, ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿವೆ.
ಇತ್ತ ಕಾಂಗ್ರೆಸ್-ಜೆಡಿಎಸ್ನಲ್ಲಿ ಉಂಟಾಗಿರುವ ಭಿನ್ನಮತ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದರಲ್ಲೂ ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸ್ಥಳೀಯ ನಾಯಕರಲ್ಲಿ ಉಂಟಾಗಿರುವ ಗೊಂದಲ ಮುಂದುವರೆಯುತ್ತಲೇ ಇದೆ.
ಸ್ಥಳೀಯ ನಾಯಕರನ್ನು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಲು ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರಾದರೂ ಪ್ರತಿಷ್ಠೆಯಿಂದಾಗಿ ಯಾರೊಬ್ಬರು ತಮ್ಮ ತಮ್ಮ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ.ಇದು ರಾಜ್ಯ ನಾಯಕರನ್ನು ಚಿಂತೆಗೀಡು ಮಾಡಿದೆ.
ಮುಂದುವರೆದ ಜಂಗೀಕುಸ್ತಿ:
ಬಿಜೆಪಿಯನ್ನು ಈ ಚುನಾವಣೆಯಲ್ಲಿ ಕಟ್ಟಿ ಹಾಕಲು ಹೊರಟಿದ್ದ ಕಾಂಗ್ರೆಸ್ ಜೆಡಿಎಸ್ಲೆಕ್ಕಾಚಾರಗಳು ತಲೆಕೆಳಗಾಗಿವೆ. ಜಿಲ್ಲಾ ಮಟ್ಟದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ನೀವು ನಮ್ಮ ವಿರುದ ಯಾವುದೇ ಶಿಸ್ತು ಕ್ರಮ ಕೈಗೊಂಡರೂ ಚಿಂತೆಯಿಲ್ಲ. ನಾವು ಮಾತ್ರ ಸುಮಲತಾ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಪಕ್ಷದ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ.
ಅಲ್ಲದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕೋಲಾರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುವುದಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಬೆಂಬಲಿಗರು ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಸಚಿವ ಆರ್.ವಿ.ದೇಶಪಾಂಡೆ ಮತ್ತು ಅವರ ಬೆಂಬಲಿಗರು ಈಗಲೂ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸೂಚಿಸುತ್ತಿಲ್ಲ. ಧಾರವಾಡದಲ್ಲಿಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಐ.ಜಿ.ಸನದಿ ಹಾಗೂ ಅವರ ಬೆಂಬಲಿಗರು ಸಹ ಮುನಿಸಿಕೊಂಡಿದ್ದಾರೆ.
ಕೊನೆ ಕ್ಷಣದಲ್ಲಿ ಹೈಕಮಾಂಡ್ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಸನದಿ ಸೇರಿದಂತೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿರುವುದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಗಣಿಜಿಲ್ಲೆ ಬಳ್ಳಾರಿಯಲ್ಲಂತೂ ಕಾಂಗ್ರೆಸ್ ಪರಿಸ್ಥಿತಿಯಂತೂ ದಿನದಿಂದ ದಿನಕ್ಕೆ ಅಯೋಮಯ ಎನ್ನುವಂತಾಗಿದೆ. ಶಾಸಕರಾದ ಆನಂದ್ ಸಿಂಗ್, ಭೀಮಾನಾಯಕ್ ಸೇರಿದಂತೆ ಜಿಲ್ಲಾ ಮುಖಂಡರ ನಡುವೆ ಒಗ್ಗಟ್ಟು ಕಾಣುತ್ತಿಲ್ಲ.
ಬಿಜೆಪಿಯಲ್ಲಿ ಬಿಕ್ಕಟ್ಟು:
ಬಿಜೆಪಿಯಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಮೇಲ್ನೋಟಕ್ಕೆ ವರಿಷ್ಠರ ಮಧ್ಯಪ್ರವೇಶದಿಂದ ಎಲ್ಲವೂ ಸರಿ ಹೋಗಿದೆ ಅಂದುಕೊಂಡಿದ್ದರೂ ಮುನಿಸಿಕೊಂಡಿರುವ ನಾಯಕರ ಕೋಪತಾಪ ಈಗಲೂ ಆರಿಲ್ಲ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇರುವುರಿಂದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಮುನಿಸಿಕೊಂಡಿರುವ ನಾಯಕರ ಮನವೊಲಿಸುತ್ತಿದ್ದಾರೆ.
ಚಿಕ್ಕೋಡಿಯಲ್ಲಿ ಕತ್ತಿ ಸಹೋದರರು ಭಿನ್ನಮತವಿಲ್ಲ ಎಂದು ಹೇಳುತ್ತಾರಾದರೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ನಾಮಪತ್ರ ಸಲ್ಲಿಸುವ ವೇಳೆ ರಮೇಶ್ ಕತ್ತಿ ಗೈರು ಆಗಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸಾರಿ ಹೇಳುತ್ತಿದೆ. ಇದೇ ರೀತಿ ಅನೇಕ ಜಿಲ್ಲೆಗಳಲ್ಲಿ ಒಳ ಹೊಡೆತದ ಭೀತಿ ಎಲ್ಲ ಪಕ್ಷಗಳಲ್ಲೂ ಕಾಡುತ್ತಿದೆ.