![DSC_0153](http://kannada.vartamitra.com/wp-content/uploads/2019/04/DSC_0153-588x381.jpg)
ಬೀದರ್. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಪತಿ ಪರವಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಬಿರು ಬಿಸಿಲಿನಲ್ಲಿಯೂ ಗೀತಾ ಖಂಡ್ರೆ ನಿತ್ಯ ಕ್ಷೇತ್ರದ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಪತಿಯ ಪರವಾಗಿ ಜೋರ್ದಾರ್ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ ವಿದ್ಯಾನಗರ ಬಡಾವಣೆಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದ ಗೀತಾ ಖಂಡ್ರೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೈಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈಶ್ವರ ಖಂಡ್ರೆ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಮಾಡಿದ ಕಾರ್ಯಗಳೆ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಖಂಡ್ರೆ ಕುಟುಂಬದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಭಾಲ್ಕಿ ಕ್ಷೇತ್ರದ ಜನರ ಆಶೀರ್ವಾದಿಂದ ಮೂರನೇ ಅವಧಿಗೆ ಶಾಸಕರಾಗಿವ ಈಶ್ವರ ಖಂಡ್ರೆ ಭಾಲ್ಕಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ. ಭಾಲ್ಕಿ ಮಾದರಿ ಬೀದರ್ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಮತದಾರರು ಸಹಕರಿಸಬೇಕು ಎಂದು ಕೋರಿದರು.
ಬಿಜೆಪಿಯ ಸುಳ್ಳು ಭರವಸೆಗಳಿಗೆ ಮತದಾರರು ಮರುಳಾಗದಿರಿ. ಸರ್ವ ಜನಾಂಗದ ಹಿತ ಕಾಪಾಡುವ ಏಕೈಕ ಪಕ್ಷ ಕಾಂಗ್ರೆಸ್. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಹೀಗಾಗಿ ಮತ್ತೇ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚಿಸಲು ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸುವುದು ಅನಿವಾರ್ಯ ಎಂದು ಹೇಳಿದರು.
ಲೋಕಸಭಾ ಕ್ಷೇತ್ರದ 8 ವಿಧಾನಸಭೆಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಅಧಿಕ ಲೀಡ್ ಬರುವ ವಿಶ್ವಾಸವಿದೆ. ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.
ಯುವ ಮುಖಂಡ ಪಪ್ಪು ಪಾಟೀಲ್ ಸೇರಿದಂತೆ ಮಹಿಳಾ ಮುಖಂಡರು, ಸ್ಥಳೀಯರು ಇದ್ದರು.
===================