
ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕಣಕ್ಕಿಳಿದಿದ್ಧಾರೆ. ಇಂದು ಅಪಾರ ಸಂಖ್ಯೆಯ ಬೆಂಬಲಿಗರ ಜತೆಗೆ ಆಗಮಿಸಿದ ರಾಹುಲ್ ಗಾಂಧಿ, ವಯನಾಡಿನಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಇನ್ನು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷರಿಗೆ ತನ್ನ ಸಹೋದರಿ ಪ್ರಿಯಾಂಕಾ ವಾದ್ರಾ ಕೂಡ ಜೊತೆಗೂಡಿದ್ದಾರೆ. ದಕ್ಷಿಣ ಭಾರತದಿಂದ ರಾಹುಲ್ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ರಾಜಕೀಯ ಕಾವು ಜೋರಾಗಿದೆ.
ರಾಹುಲ್ ಗಾಂಧಿ ನಾಮಪತ್ರದ ಜತೆಗೆ ನೀಡಲಾಗಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಒಟ್ಟು ತಾವು 15.09 ಕೋಟಿ ರೂ. ವೌಲ್ಯದ ಸ್ಥಿರ ಮತ್ತು ಚರಾಸ್ತಿಯನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ನಮ್ಮ ಕುಟುಂಬ ಸರ್ಕಾರಕ್ಕೆ ಯಾವುದೇ ಬಾಕಿ ನೀಡಬೇಕಿಲ್ಲ. ಜತೆಗೆ 40 ಸಾವಿರ ನಗದು, 2, 91,367 ಮೌಲ್ಯದ ಬಂಗಾರ, ಬೇರೆ ಸಂಸ್ಥೆಗಳಲ್ಲಿ 5,19,44,682 ರೂಪಾಯಿ ಹಣ ಹೂಡಿಕೆ ಮಾಡಲಾಗಿದೆ ಎಂದು ತೋರಿಸಲಾಗಿದೆ.
ಸದ್ಯ ರಾಹುಲ್ ಗಾಂಧಿ 7,93,03,977 ರೂ ಚರಾಸ್ತಿ, 10,08,18,284 ರೂ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೇ ತನ್ನ ತಾಯಿ ಸೋನಿಯಾ ಗಾಂಧಿ ಅವರಿಂದ 5 ಲಕ್ಷ ಸಾಲ ಪಡೆದಿರುವುದಾಗಿ ರಾಹುಲ್ ಹೇಳಿಕೊಂಡಿದ್ದಾರೆ.
ಇನ್ನು ನಾಮಪತ್ರ ಸಲ್ಲಿಕೆಯ ನಂತರ ನಡೆದ ರೋಡ್‌ಶೋನಲ್ಲಿ ಬೃಹತ್ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ರಾಹುಲ್-ಪ್ರಿಯಾಂಕಾರತ್ತ ಕೈಬೀಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ವಯನಾಡ್ ಜೊತೆಗೆ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿಯಿಂದಲೂ ಚುನಾವಣಾ ಕಣಕ್ಕಿಳಿದಿದ್ದಾರೆ. ವಯನಾಡ್‌ನಲ್ಲಿ ಎಪ್ರಿಲ್ 23ರಂದು ಮತದಾನ ನಡೆಯಲಿದ್ದರೆ ಅಮೇಠಿಯಲ್ಲಿ ಮೇ 6ರಂದು ಜನರು ಮತದಾನ ಮಾಡಲಿದ್ದಾರೆ.