ಮೈಸೂರು,ಏ.5-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಸಾಧನೆ ಆಗುವುದೋ ಇಲ್ಲವೋ ಎಂಬ ಆತಂಕ ಎರಡೂ ಪಕ್ಷಗಳ ಮುಖಂಡರು-ಕಾರ್ಯಕರ್ತರನ್ನು ಕಾಡುತ್ತಿತ್ತು. ಆದರೆ ಇದೀಗ ಮೈತ್ರಿ ಧರ್ಮ ಪಾಲನೆಗೆ ಇಬ್ಬರು ನಾಯಕರು ಒಪ್ಪಿಗೆ ಸೂಚಿಸಿರುವುದರಿಂದ ಒಂದರ್ಥದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ಹಾದಿ ಸುಗಮವಾದಂತಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಬ್ಬರೂ ಒಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮತ ಬೇಟೆಗೆ ಇಳಿಯದಿದ್ದರೆ ವಿಜಯಶಂಕರ್ ಗೆಲುವು ಕಷ್ಟಸಾಧ್ಯವಾಗುತ್ತಿತ್ತು.
ಇಲ್ಲಿಯವರೆಗೂ ಇವರಿಬ್ಬರ ನಡುವೆ ಒಂದು ರೀತಿಯ ರಾಜಕೀಯ ವೈಷಮ್ಯ ಮನೆ ಮಾಡಿದ್ದರಿಂದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ಅಭ್ಯರ್ಥಿ ಪರ ಮತ ಯಾಚಿಸಲು ಈ ಇಬ್ಬರು ನಾಯಕರು ಬಂದಿರಲಿಲ್ಲ.
ಹಾಗಾಗಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಒಂದು ರೀತಿಯ ವೈಮನಸ್ಸು ಉಂಟಾಗಿತ್ತು. ವಿಧಾನಸಭಾ ಚುನಾವಣೆ ನಂತರ ಇವರಿಬ್ಬರು ವೈರಿಗಳಂತಿದ್ದು, ಎಲ್ಲೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಆದರೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಇದೀಗ ಇವರಿಬ್ಬರೂ ಒಟ್ಟಾಗಿ ಮತಯಾಚನೆಗೆ ತೆರಳಲು ಮಾತುಕತೆ ನಡೆಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಹೀಗಿರುವಾಗ ನಮ್ಮಿಬ್ಬರ ನಡುವಿನ ರಾಜಕೀಯ ವೈಮನಸ್ಸಿನಿಂದ ಇಬ್ಬರೂ ಹೀಗೆ ದೂರವಿದ್ದರೆ, ವಿಜಯಶಂಕರ್ ಹಾಗೂ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೇಲೆ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಇವರಿಬ್ಬರೂ ಇದೀಗ ರಾಜಕೀಯ ವೈಷಮ್ಯ ಮರೆತು ಮತ್ತೆ ಒಂದಾಗಿದ್ದಾರೆ.
ಸೋಮವಾರದ ನಂತರ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜಿಟಿಡಿ-ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಒಟ್ಟಾಗಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.
ಹಾಗಾಗಿ ಮುಂದಿನ ದಿನಗಳಲ್ಲಿ ಈ ಇಬ್ಬರು ನಾಯಕರ ಪ್ರಚಾರದ ಪ್ರಭಾವದಿಂದ ವಿಜಯಶಂಕರ್ ಅವರ ಗೆಲುವಿನ ಹಾದಿ ಸುಗಮವಾಗಬಹುದೆಂದು ಹೇಳಬಹುದಾಗಿದೆ.
ಈ ಬೆಳವಣಿಗೆಯಿಂದ ಮೈಸೂರು-ಕೊಡಗು ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಇದ್ದ ಒಂದು ರೀತಿಯ ಭಿನ್ನಾಭಿಪ್ರಾಯಗಳು ಮುಂದಿನ ದಿನಗಳಲ್ಲಿ ಇಲ್ಲದಂತಾಗಿ ಎರಡೂ ಪಕ್ಷಗಳ ಮುಖಂಡರು-ಕಾರ್ಯಕರ್ತರು ಒಟ್ಟಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.