
ಬೆಂಗಳೂರು: ಧಾರವಾಡ ಕಟ್ಟಡ ಕುಸಿತ ಪ್ರಕರಣದ ಕಹಿ ನೆನಪು ಮಾಸುವ ಮೊದಲೇ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 4.30ರ ಸುಮಾರಿಗೆ ಘಟನೆ ನಡೆದಿದೆ. ಕಟ್ಟಡ ಕುಸಿಯುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಹಾರ ಮೂಲದ ರಾಕೇಶ್ ಹಾಗೂ ರಾಹುಲ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ.
ಎಪಿಎಂಸಿ ವತಿಯಿಂದ ಕಟ್ಟಡ ನಿರ್ಮಾಣವಾಗುತ್ತಿತ್ತು. ಈಗಾಗಲೇ ಎರಡು ಅಂತಸ್ತುಗಳು ನಿರ್ಮಾಣವಾಗಿದ್ದವು. ಆದರೆ, ನಿರ್ಮಾಣ ಹಂತದಲ್ಲಿರುವಾಗಲೇ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಗುತ್ತಿಗೆದಾರರಿಗೆ ಪಾರ್ಕಿಂಗ್ ಲಾಟ್ ನಿರ್ಮಾಣಕ್ಕೆ ಎಪಿಎಂಸಿ ಗುತ್ತಿಗೆ ನೀಡಿತ್ತು. ಗ್ರೌಂಡ್ ಫ್ಲೋರ್ ಮತ್ತು ಮೊದಲನೇ ಮಹಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಎರಡನೇ ಮಹಡಿಗೆ ಕಾಂಕ್ರೀಟ್ ಹಾಕುವ ಕೆಲಸ ನಡೆಯುತ್ತಿತ್ತು. ಈ ವೇಳೆ ಸೆಂಟ್ರಿಂಗ್ ಕುಸಿದು ಬಿದ್ದಿದೆ. ಈಗಾಗಲೇ ಪೊಲೀಸರು ಇಂಜಿನಿಯರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಂದಹಾಗೆ, ದುರ್ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿದ ನಂತರವೇ ನಿಜವಾದ ಕಾರಣ ತಿಳಿದು ಬರಬೇಕಿದೆ. ಕಳೆದ ತಿಂಗಳು ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಿದ್ದಿತ್ತು. ಈ ವೇಳೆ ಹಲವರು ಮೃತಪಟ್ಟಿದ್ದರು.