ಮೈಸೂರು,ಏ.5-ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಂದು ನಡೆದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಸಚಿವರ ಮಾತಿಗೂ ಬೆಲೆ ಕೊಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಸಂದರ್ಭದಲ್ಲಿ ಚುನಾವಣೆಯಲ್ಲಿ ಹೊಂದಾಣಿಕೆ ಕುರಿತಂತೆ ನಡೆದ ಚರ್ಚೆಗೆ ಯಾವುದೇ ಕಾರ್ಯಕರ್ತರು ಒಪ್ಪಿಗೆ ಸೂಚಿಸಲಿಲ್ಲ. ಬದಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮರಿತಿಬ್ಬೇಗೌಡ ಮಾತನಾಡುವಾಗ ಸಭೆಯಲ್ಲಿ ಆರಂಭವಾದ ಗಲಾಟೆ ಒಂದು ಹಂತದಲ್ಲಿ ಸ್ವತಃ ಜಿ.ಟಿ.ದೇವೇಗೌಡರು ಗದ್ದಲ ನಿಲ್ಲಿಸಲು ಎದ್ದು ನಿಂತರೂ ಪ್ರಯೋಜನವಾಗಲಿಲ್ಲ.
ಸಭೆಯಲ್ಲಿ ಕಾರ್ಯಕರ್ತರ ಮನವೊಲಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಕೆಲವರು ಮೋದಿಗೆ ಜೈಕಾರ ಹಾಕಿದರು. ಕೊಡಗು-ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ವಿಜಯಶಂಕರ್ ಅವರ ಪ್ರಚಾರದಲ್ಲಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಳ್ಳದ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಯಿತು.
ಒಂದೆಡೆ ಮೈತ್ರಿ ಅಭ್ಯರ್ಥಿ ಇರುವೆಡೆ ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ಪ್ರಚಾರ ನಡೆಸುವಂತೆ ಉಭಯ ಪಕ್ಷಗಳ ನಾಯಕರು ಆದೇಶ ನೀಡಿದ್ದರೂ ಅದು ಮೈಸೂರಿನಲ್ಲಿ ಅಷ್ಟೇನೂ ವರ್ಕೌಟ್ ಆಗಿರಲಿಲ್ಲ.
ವಿಜಯಶಂಕರ್ ಅವರ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಷ್ಟೇ ಕಾಣಿಸಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆದಾಗ ಪಕ್ಷದ ಕಾರ್ಯಕರ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಒಂದು ಹಂತದಲ್ಲಿ ಸಭೆಯಲ್ಲಿ ಗದ್ದಲವೇ ಹೆಚ್ಚಾಗಿ ಯಾವುದೇ ನಿರ್ಣಯ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿತ್ತು.