ನಾಗ್ಪುರ್: “ಗಂಡ ಬದಲಾದಂತೆ ಕೇಂದ್ರ ಸಚಿವ ಸ್ಮೃತಿ ಇರಾನಿ ಹಣೆಬೊಟ್ಟಿನ ಗಾತ್ರ ದೊಡ್ಡದಾಗುತ್ತಿದೆ,” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಮೈತ್ರಿಯ ಪಿಆರ್ಪಿ ಪಕ್ಷದ ನಾಯಕ ಜಯದೀಪ್ ಕವಾಡೆ ವಿರುದ್ಧ ನಾಗ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಚಾರ ಸಮಾವೇಶದಲ್ಲಿ ಪೀಪಲ್ಸ್ ರಿಪಬ್ಲಿಕ್ ಪಕ್ಷದ ನಾಯಕ ಕವಾಡೆ, “ನಿತಿನ್ ಗಡ್ಕರಿ ಪಕ್ಕದಲ್ಲಿ ಕುಳಿತು ಸ್ಮೃತಿ ಇರಾನಿ, ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಾರೆ. ಸ್ಮೃತಿ ಇರಾನಿ ಬಗ್ಗೆ ಒಂದು ವಿಷಯ ಹೇಳುತ್ತೇನೆ ಕೇಳಿ, ಅವರ ಹಣೆಯಲ್ಲಿ ಅಷ್ಟು ದೊಡ್ಡದಾಗಿ ಬಿಂದಿ ಇಡಲು ಕಾರಣವಿದೆ. ಅವರು ಆಗಾಗ್ಗೆ ಗಂಡನನ್ನು ಬದಲಾಯಿಸುತ್ತಿರುತ್ತಾರೆ. ಇದರಿಂದಾಗಿ ಅವರ ಬೊಟ್ಟಿನಲ್ಲಿರುವ ಚುಕ್ಕಿಗಳ ಸಂಖ್ಯೆ ಕೂಡ ಹಿಗ್ಗುತ್ತ ಹೋಗಿದೆ,” ಎಂದು ಹೇಳಿದ್ದರು.
ಮಹಾರಾಷ್ಟ್ರದ ನಾಗಪುರ್ನ ಬಗದ್ಗಂಜ್ನಲ್ಲಿ ಮರಾಠಿಯಲ್ಲಿ ಪ್ರಚಾರ ಮಾಡಿದ ಅವರು, “ಸ್ಮೃತಿ, ಗಡ್ಕರಿ ಹಾಗೂ ಮೋದಿ ಅವರ ಮಂತ್ರಿ. ಅವರು ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಾರೆ. ಆದರೆ ಅವರು ನೆನಪಿನಲ್ಲಿ ಇಡಲಿ ಗಂಡನನ್ನು ಬದಲಾಯಿಸದಂತೆ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ,” ಎಂದು ಟೀಕಿಸಿದರು.
ಚುನಾವಣಾ ಸಮಯದಲ್ಲಿ ಮಹಿಳಾ ಮಂತ್ರಿಗಳ ಮೇಲೆ ಈ ರೀತಿ ಅವಹೇಳನಾ ಹೇಳಿಕೆ ನೀಡಿರುವ ಅವರ ವಿರುದ್ಧ ಬಿಜೆಪಿಯುವ ಘಟಕ ದೂರು ದಾಖಲಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮಹಿಳೆಯನ್ನು ಅವಮಾನಿಸಲಾಗಿದೆ ಎಂದು ನಾಗ್ಪುರ್ ಠಾಣೆಯಲ್ಲಿ ದೂರಿನಲ್ಲಿ ದಾಖಲಿಸಲಾಗಿದೆ.
ಇದಕ್ಕೂ ಮೊದಲು ಬಿಜೆಪಿ ಶಾಸಕರೊಬ್ಬರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮುಖ ಹಾಗೂ ಕೂದಲ ಬಗ್ಗೆ ಕೂಡ ಅವಹೇಳನಕಾರಿ ಟೀಕೆ ಮಾಡಿದ್ದರು.
ಇದಾದ ಬಳಿಕ ಹರ್ಯಾಣ ನೃತ್ಯ ಹಾಗೂ ಸಂಗೀತಗಾರ್ತಿ ಸಪ್ನಾ ಚೌಧರಿ ಕಾಂಗ್ರೆಸ್ಗೆ ಸೇರುವ ಕುರಿತು ಟೀಕಿಸಿದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಸೋನಿಯಾ ಗಾಂಧಿಯಂತಹ ಡಾನ್ಸರ್ಗಳಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಎಂದಿದ್ದರು.