ಬೆಂಗಳೂರು, ಏ.3- ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್ ಗಾಂಧಿಯವರನ್ನು ನಂಬುತ್ತಾರೆ. ನಮ್ಮ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆ ಚುನಾವಣಾ ಭರವಸೆಗಳು ಮಾತ್ರವಲ್ಲ, ಗಾಯಗೊಂಡಿರುವ ದೇಶಕ್ಕೆ ಮದ್ದು ನೀಡುವ ದಾಖಲಾತಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ಎಐಸಿಸಿ ಬಿಡುಗಡೆ ಮಾಡಿದ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಪ್ರಣಾಳಿಕೆ ಚುನಾವಣೆ ಗೆಲ್ಲುವ ಉದ್ದೇಶ ಮಾತ್ರ ಹೊಂದಿಲ್ಲ. ಐದು ವರ್ಷಗಳಲ್ಲಿ ಘಾಸಿಗೊಂಡಿರುವ ಭಾರತಕ್ಕೆ ಸಾಂತ್ವನ ಹೇಳುವ ಪ್ರಣಾಳಿಕೆಯಾಗಿದೆ.
ಗೋ ಹತ್ಯೆ, ದಲಿತರ ಮೇಲೆ ನಡೆದ ದೌರ್ಜನ್ಯಗಳು, ವಿದ್ಯಾರ್ಥಿಗಳ ಬಾಯಿ ಮುಚ್ಚಿಸುವ ಪ್ರಯತ್ನ, ವೈಚಾರಿಕ ಹತ್ಯೆಗಳು ಸೇರಿದಂತೆ ಐದು ವರ್ಷಗಳಲ್ಲಿ ನಡೆದ ಘಟನೆಗಳಿಂದ ದೇಶ ಘಾಸಿಗೊಂಡಿದೆ.ಅದನ್ನು ಸರಿ ಪಡಿಸಬೇಕಿದೆ.ಕಾರ್ಮಿಕ, ರೈತಾಪಿ ವರ್ಗಗಳಿಗೆ ರಕ್ಷಣೆ ನೀಡಲು ಮೋದಿ ಸರ್ಕಾರ ವಿಫಲವಾಗಿದೆ.ದೇಶದಲ್ಲಿ ಆರ್ಥಿಕ ಸಂಕಷ್ಟ ಉದ್ಭವಿಸಿದೆ. ವಿತ್ತೀಯ ಕೊರತೆ ಹೆಚ್ಚಾಗಿದೆ. ಪ್ರಧಾನಿ ಮೋದಿ ಮತ್ತು ನಿರುಪಯುಕ್ತ ಆರ್ಥಿಕ ಸಚಿವ ಅರುಣ್ ಜೇಟ್ಲಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ.
ನೋಟು ಅಮಾನ್ಯೀಕರಣದಿಂದ 4 ಲಕ್ಷ ಕೋಟಿ ನಷ್ಟವಾಗಿದೆ. ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆ ಹಾಳಾಗಿದೆ.ಸಾಮಾಜಿಕ ಮತ್ತು ಆರ್ಥಿಕ ತಲ್ಲಣ ಸೃಷ್ಠಿಯಾಗಿದೆ.
ಯುಪಿಎ ಅವಧಿಯಲ್ಲಿ ಶಾಂತಿ ಸ್ಥಾಪನೆಯಾಗಿದ್ದ ಕಾಶ್ಮಿರದಲ್ಲಿ ಜನ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದರು. ಹಿಂಸಾಚಾರ ಕಡಿಮೆಯಾಗಿತ್ತು.ಭಯೋತ್ಪಾದಕ ಚಟುವಟಿಕೆ ಕಡಿಮೆಯಾಗಿತ್ತು. ಆದರೆ ಬಿಜೆಪಿ ಧೋರಣೆಗಳಿಂದ ಮತ್ತೆ ಅಲ್ಲಿ ಪರಿಸ್ಥಿತಿ ಹದಗೆಟ್ಟಿದೆ.ದೇಶದಲ್ಲಿ ವೈಚಾರಿಕ ವಿಷಯಗಳಿಗೆ ಕೊಲೆಗಳಾಗಿವೆ. ನಕ್ಸಲೀಯ ಚಟುವಟಿಕೆಗಳು ಹೆಚ್ಚಾಗಿವೆ. ಈ ಎಲ್ಲಾ ವಿಷಯಗಳಿಂದ ಗಾಯಗೊಂಡಿರುವ ಭಾರತವನ್ನು ಸರಿ ಪಡಿಸಬೇಕಿದೆ. ರಾಜಕೀಯ ಪಕ್ಷಗಳೆಂದರೆ ಕೇವಲ ಅಧಿಕಾರ ಹಿಡಿಯುವುದು ಮಾತ್ರವಲ್ಲ. ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಸಂಕಲ್ಪ ಹೊಂದಿರಬೇಕು. ಕಾಂಗ್ರೆಸ್ ಅಂತಹ ಸಂಕಲ್ಪ ಹೊಂದಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.
ಬಡಜನರಿಗೆ ಆರ್ಥಿಕ ನೆರವು ನೀಡುವ ನ್ಯಾಯ್ ಯೋಜನೆಗೆ ಬಿಜೆಪಿ ಟೀಕೆ ಮಾಡುತ್ತಿದೆ. ಹಣ ಎಲ್ಲಿಂದ ತರುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಈವರೆಗೂ ಸುಳ್ಳು ಹೇಳಿಲ್ಲ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಸ್ಪಷ್ಟ ಭರವಸೆ ನೀಡಲಾಗಿದೆ.ರಾಜಕೀಯ ಮಾತ್ರವಲ್ಲ, ಉದ್ಯೋಗದಲ್ಲೂ ಮೀಸಲಾತಿ ನೀಡಲು ನಮ್ಮ ಸರ್ಕಾರ ಒಂದು ವಾರದಲ್ಲಿ ಕಾನೂನು ರೂಪಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಬಿಜೆಪಿ ಐದು ವರ್ಷಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನ ನಡೆಸಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ತನ್ನ ಐದು ವರ್ಷಗಳಲ್ಲಿ ಜನ ಪರವಾದ ಒಂದೇ ಒಂದು ಕಾನೂನು ರೂಪಿಸಲಿಲ್ಲ ಎಂದು ಕಿಡಿಕಾರಿದ ಅವರು, ಕಾಂಗ್ರೆಸ್, ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ. ಸುಳ್ಳು ಹೇಳುವುದು ಬಿಜೆಪಿಯವರ ಡಿಎನ್ಎ ಆಗಿದೆ ಎಂದು ಟೀಕಿಸಿದರು.
ಶಸ್ತ್ರಾಸ್ತ್ರ ಕಾಯ್ದೆಯನ್ನು ತೆಗೆಯುವುದಾಗಿ ಕಾಂಗ್ರೆಸ್ ಹೇಳಿದೆ ಎಂದು ಅಪಪ್ರಚಾರ ಮಾಡುತ್ತಿದೆ.ಅದು ಸುಳ್ಳು, ಜನ ವಿರೋಧಿ ನಿಲುವುಗಳಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಥೋಡ್ ಮತ್ತು ಘೋರ್ಪಡೆ ಪತ್ರಿಕಾಗೋಷ್ಠಿಯಲ್ಲಿದ್ದರು.