ಮೈಸೂರು,ಏ.3-ಮೈತ್ರಿ ಸರ್ಕಾರದ ಅಧಿಕೃತ ಅಭ್ಯರ್ಥಿಯಾಗಿರುವ ವಿಜಯಶಂಕರ್ ಪರ ಮತ ಬೇಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಪಕ್ಷದವರು ಚುನಾವಣಾ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರೂ ಸಹ ಜಿಟಿಡಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರ್ಯಾರೂ ಇತ್ತ ಮುಖ ಮಾಡಿರಲಿಲ್ಲ.
ಆದರೆ ಜಿಟಿಡಿ ಅವರು ಇದೀಗ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡು ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಈ ಸಂಬಂಧ ಏಪ್ರಿಲ್ 8ರಂದು ಮೈಸೂರಿನಲ್ಲಿ ಸಮಾವೇಶವನ್ನು ಏರ್ಪಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.ಇದಕ್ಕೂ ಮುನ್ನ ಏ.7ರಂದು ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆಯೊಂದನ್ನು ನಡೆಸಿ ಪ್ರಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ವಿಜಯಶಂಕರ್ ಪರ ಪ್ರಚಾರಕ್ಕೆ ಬರುತ್ತಾರೆಯೇ ಎಂಬ ಬಗ್ಗೆ ಕುತೂಹಲ ಮೂಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ಅವರು ಒಂದಾಗಿ ಪ್ರಚಾರ ಮಾಡುತ್ತಾರೆಯೇ ಎಂಬುದು ಡಾಲರ್ ಪ್ರಶ್ನೆಯಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಟಿಡಿ ವಿರುದ್ಧ ಸಿದ್ದರಾಮಯ್ಯ ಸೋಲು ಕಂಡಿದ್ದರು. ಹಾಗಾಗಿ ಇವರಿಬ್ಬರು ಒಂದು ರೀತಿ ರಾಜಕೀಯ ಬದ್ಧವೈರಿಗಳಾಗಿದ್ದಾರೆ. ಆದರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ.
ರಾಜ್ಯ ಮಟ್ಟದಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ರಾಜಕೀಯವಾಗಿ ಒಂದಾಗಿದ್ದಾರೆ. ಆದರೆ ಮೈಸೂರಿನಲ್ಲಿ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ.ದೇವೇಗೌಡರ ನಡುವೆ ಒಂದು ರೀತಿಯಲ್ಲಿ ರಾಜಕೀಯ ವೈಷಮ್ಯ ಮುಂದುವರೆದಿದೆ ಎನ್ನಲಾಗುತ್ತಿದೆ.