ಕುಣಿಗಲ್, ಏ.3- ಕಳೆದ ವರ್ಷಗಳಲ್ಲಿ ನೀರಾವರಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ಚಕಾರವೆತ್ತದೆ.ಕೇವಲ ಸುಳ್ಳು ಜಾಹೀರಾತು ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಸಂಸದ ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ತಾಲೂಕಿನ ಕೊತ್ತಗೇರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅವರು ಯಾವುದೇ ರೈತಪರ ಯೋಜನೆಗಳನ್ನು ಜಾರಿಗೆ ತರದೇ ಶ್ರೀಮಂತರ ಪರವಾಗಿ ಅಧಿಕಾರ ನಡೆಸುತ್ತಿದ್ದಾರೆ. ಸುಳ್ಳನ್ನೇ ಗಟ್ಟಿಯಾಗಿ ಹೇಳುವ ಮೂಲಕ ಸತ್ಯ ಮಾಡಲು ಹೊರಟಿದ್ದಾರೆ.ಕುಣಿಗಲ್ ತಾಲೂಕಿಗೆ ಕಳೆದ 25ವರ್ಷಗಳಿಂದ ಹೇಮಾವತಿಯಿಂದ ಬರಬೇಕಾದ ನೀರು ಬಂದಿಲ್ಲ. ಇದಕ್ಕೆ ಕಾರಣ ತುಮಕೂರು ಜಿಲ್ಲೆಯ ಮೇಲ್ಭಾಗದ ಬಿಜೆಪಿ ಮುಖಂಡರ ಸ್ವಹಿತ ರಾಜಕೀಯ ಪ್ರಮುಖ ವಿಷಯವಾಗಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಅವರು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಆಧುನಿಕ ನಾಲಾ ಕಾಮಗಾರಿಗಾಗಿ 700ಕೋಟಿ ಹಣವನ್ನು ಮಂಜೂರು ಮಾಡಿ ಕಾಮಗಾರಿ ನಡೆಯುತ್ತಿದೆ.ಇದನ್ನು ಸಹ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಆದರೆ ನಾವೇನು ತುಮಕೂರು ಪಾಲಿನ ನೀರನ್ನು ಕೇಳುತ್ತಿಲ್ಲ, ಕುಣಿಗಲ್ ತಾಲೂಕಿಗೆ ಬರಬೇಕಾದ ನೀರಿನ ಹಕ್ಕನ್ನು ಕೇಳುತ್ತಿದ್ದೇವೆ. ಅದನ್ನು ಪಡೆದೇ ತೀರುತ್ತೇನೆ ಎಂದು ಸವಾಲು ಹಾಕಿದರು.
ಜಾತ್ಯಾತೀತ ಶಕ್ತಿಗಳು ಒಂದಾಗಬೇಕೆಂಬ ಉದ್ದೇಶದಿಂದ ಕೋಮುವಾದಿ ಬಿಜೆಪಿ ಅನ್ನು ದೂರವಿಡಬೇಕು ಎಂಬ ಧ್ಯೇಯೋದ್ದೇಶದಿಂದ ರಾಹುಲ್ ಗಾಂಧಿ ಮತ್ತು ದೇವೇಗೌಡರು ಪರಸ್ಪರ ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿ ಒಪ್ಪಂದದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರುಗಳು ಮನಸ್ತಾಪವನ್ನು ಬದಿಗಿಟ್ಟು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಕುಣಿಗಲ್ ಕ್ಷೇತ್ರಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದು, ಈ ವೇಳೆ ಕುಣಿಗಲ್ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸಾಮೂಹಿಕವಾಗಿ ಮತಯಾಚನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಚಾರದಲ್ಲಿ ಶಾಸಕ ಡಾ.ರಂಗನಾಥ ಭಾಗವಹಿಸಿದ್ದರು.