ಹಾಸನ, ಏ.3- ಹಳೆಯ ಭಿನ್ನಾಭಿಪ್ರಾಯ ಮರೆತು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆ ನೀಡಿದರು.
ಸಕಲೇಶಪುರ ತಾಲೂಕಿನ ಎಳಸೂರಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಗೌಡರು, ಉಭಯ ಪಕ್ಷಗಳ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೈತ್ರಿ ಅಭ್ಯರ್ಥಿಗಳು ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು.ಬಿಜೆಪಿ 10 ಕ್ಷೇತ್ರಗಳಿಗಿಂತ ಕಡಿಮೆ ಕ್ಷೇತ್ರಗಳಿಗೆ ಸೀಮಿತಗೊಳ್ಳುವ ಹಾಗೆ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಸಕಲೇಶಪುರ ತಾಲೂಕಿನ ಉನ್ನಿಗನಹಳ್ಳಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಆನೆ ಮತ್ತು ಮಾನವ ನಡುವಿನ ಸಂಘರ್ಷ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಆಲೂರು, ಸಕಲೇಶಪುರ ಭಾಗದಲ್ಲಿ ಆನೆಗಳ ಸಮಸ್ಯೆ ಇದೆ.ಆನೆಗಳ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಲೋಕಸಭೆ ಚುನಾವಣೆ ನಂತರ ಈ ಭಾಗದಿಂದ ನಿಯೋಗವೊಂದನ್ನು ಕೊಂಡೊಯ್ದು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದರು.
ಆನೆಗಳಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಹಾಗೂ ಸಂಕಷ್ಟ ಏನೆಂಬುದು ಗೊತ್ತಿದೆ.ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.