ಇಟಾನಗರ್: ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ನಂತರ ಅವರ ಪ್ರಣಾಳಿಕೆಯೂ ಸುಳ್ಳು. ಇದೊಂದು ಬೂಟಾಟಿಕೆಯ ಕೃತಿ ಎಂದು ಆರೋಪಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, 2004ರಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಗಳನ್ನು ನೆನೆದರು. “2009ರ ವೇಳೆಗೆ ಎಲ್ಲರ ಮನೆಗೂ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ಕಾಂಗ್ರೆಸ್ ಆಶ್ವಾಸನೆ ನೀಡಿತ್ತು. ಆದರೆ, 2014ರ ಲೋಕಸಭಾ ಚುನಾವಣೆ ಬಂದರೂ ದೇಶದ 18,000 ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಕಾಂಗ್ರೆಸ್ನಂತೆ ಅವರ ನಾಯಕರು ನೀಡುವ ಭರವಸೆಗಳು ಸುಳ್ಳು ಹಾಗೂ ಭ್ರಷ್ಟಾಚಾರದಿಂದ ಕೂಡಿವೆ. ಕಾಂಗ್ರೆಸ್ ಪ್ರಣಾಳಿಕೆ ಬೂಟಾಟಿಕೆಯ ಕೃತಿ,” ಎಂದು ಮೋದಿ ವ್ಯಂಗ್ಯವಾಡಿದರು.
“ಮತ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ರೈತರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಜನರು ನಂಬಿಕೆ ಹಾಗೂ ಭ್ರಷ್ಟಾಚಾರದಲ್ಲಿ ಒಂದನ್ನು ಆಯ್ಕೆ ಮಾಡಬೇಕಿದೆ,” ಎಂದರು ಮೋದಿ. ಈ ಮೂಲಕ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಿಂದ ಕೂಡಿದೆ ಎಂದು ಪರೋಕ್ಷವಾಗಿ ಟೀಕಿಸಿದರು. ಏ.11ರಂದು ಅರುಣಾಚಲ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಏಕ ಬಾರಿಗೆ ನಡೆಯಲಿದೆ.
ಬಡತನ ತೊಲಗಿಸಲು ದೇಶದ ಶೇ. 20 ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ಕೊಡುವುದು. ರೈಲ್ವೆ ಬಜೆಟ್ನಂತೆ ರೈತರಿಗೇ ಪ್ರತ್ಯೇಕ ಬಜೆಟ್ ನೀಡುವ ವಿಚಾರ ಸೇರಿದಂತೆ ಸಾಕಷ್ಟು ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿತ್ತು .