ಬೆಂಗಳೂರು, ಏ.3- ಬಾಕಿ ಉಳಿದಿದ್ದ ದಾವಣಗೆರೆ-ಧಾರವಾಡ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನೆಲ್ಲಾ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
ಕೊನೆ ಕ್ಷಣದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಿದೆ.ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜಿ.ಮಂಜಪ್ಪ ಅವರಿಗೆ ಟಿಕೆಟ್ ನೀಡಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅಥವಾ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಮೊದಲ ಪಟ್ಟಿಯಲ್ಲೇ ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಘೋಷಿಸಿತ್ತು.
ಆದರೆ, ಅವರು ಚುನಾವಣೆಗೆ ನಿಲ್ಲಲು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಯುವಂತೆ ಹೈಕಮಾಂಡ್ ಸೂಚಿಸಿತ್ತು. ಆದರೆ, ಅವರು ಕೂಡ ಆಸಕ್ತಿ ತೋರಲಿಲ್ಲ. ಈ ಇಬ್ಬರು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಮಂಜಪ್ಪ ಅವರಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದು, ಅವರ ಕುಟುಂಬದ ಮಾತಿಗೆ ಬೆಲೆ ಕೊಟ್ಟು ಮಂಜಪ್ಪ ಅವರನ್ನೇ ಕಣಕ್ಕಿಳಿಸಿದೆ.
ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಸಾಕಷ್ಟು ಪ್ರಭಾವ ಹೊಂದಿದ್ದರು.ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸೋಲಾಯಿತು. ಜತೆಗೆ ಶಾಮನೂರು ಶಿವಶಂಕರಪ್ಪ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಬೇಸರವಿತ್ತು. ಇದೀಗ ತಮ್ಮ ಆಪ್ತರನ್ನು ಕಣಕ್ಕಿಳಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಂತಿಮ ಕ್ಷಣದಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಘೋಷಣೆಯಾಗಿದೆ. ತಡರಾತ್ರಿವರೆಗೆ ಐ.ಜಿ.ಸನದಿ ಅವರಿಗೆ ಟಿಕೆಟ್ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಅಂತಿಮವಾಗಿ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ.
ಕಳೆದ ಒಂದು ವಾರದಿಂದ ಐ.ಜಿ.ಸನದಿ ಅವರ ಪುತ್ರ ಶಾಕೀರ್ ಸನದಿ, ವಿನಯ್ ಕುಲಕರ್ಣಿ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಳೆದೆರಡು ದಿನಗಳಿಂದ ಡಾ.ಸೀಮಾ ಸಾದಿಕ್ ಅವರ ಹೆಸರು ಕೂಡ ಕೇಳಿಬಂದಿತ್ತು. ಮಾಜಿ ಸಂಸದರಾದ ಐ.ಜಿ.ಸನದಿ ಅವರನ್ನೇ ಕಣಕ್ಕಿಳಿಸಬೇಕೆಂಬ ಒತ್ತಾಯ ಕೂಡ ಕೇಳಿಬಂದಿತ್ತು.ನಿನ್ನೆ ಸಿದ್ದರಾಮಯ್ಯನವರು ಸಭೆ ನಡೆಸಿ ಎಲ್ಲರೊಂದಿಗೆ ಸಮಾಲೋಚಿಸಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಿದ್ದರು.
ಟಿಕೆಟ್ ಸಿಗದಿದ್ದರೆ ಇಂದು ವಿನಯ್ ಕುಲಕರ್ಣಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದರು. ಆದರೆ, ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಬಿ ಫಾರಂನೊಂದಿಗೆ ನಾಳೆ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ನ ವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ.