ಬೆಂಗಳೂರು, ಏ.2- ನೀರಿಗೆ ಹಾಹಾಕಾರ ಉಂಟಾಗಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಎಲ್ಲ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ಸಖಿ ಮಾದರಿ ಬೂತ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಆಯುಕ್ತರು ಈ ವಿಷಯ ತಿಳಿಸಿದರು.
ನೀರಿನ ಅಭಾವ ಇರುವ ಕೆಲ ಪ್ರದೇಶಗಳಿಗೆ 287 ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಇನ್ನು ಹಲವಾರು ಪ್ರದೇಶಗಳಿಂದ ನೀರಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ ಎಂದರು.
ಇನ್ನೆರಡು ದಿನಗಳಲ್ಲಿ ನೀರಿನ ಅಭಾವವಿರುವ ಪ್ರದೇಶಗಳಿಗೆ ಖಾಸಗಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು.ನೀರು ಹಂಚಿಕೆ ಮಾಡುವ ಟ್ಯಾಂಕರ್ ಮಾಲೀಕರಿಗೆ ಪಾಲಿಕೆ ವತಿಯಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಬೇಸಿಗೆ ಸಂದರ್ಭದಲ್ಲಿ ನಗರದಲ್ಲಿ ಉಂಟಾಗಿರುವ ನೀರಿನ ಹಾಹಾಕಾರ ತಪ್ಪಿಸುವ ಕುರಿತಂತೆ ಕಳೆದ ಪಾಲಿಕೆ ಸಭೆಯಲ್ಲಿ ಹಲವಾರು ಸದಸ್ಯರು ಧ್ವನಿ ಎತ್ತಿದ್ದರು.
ಹೀಗಾಗಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಅನುಮತಿ ನೀಡುವಂತೆ ನಾವು ಮಾಡಿಕೊಂಡ ಮನವಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ.
ಆಯೋಗದ ಅನುಮತಿ ಹಿನ್ನೆಲೆಯಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದ್ದು, ಒಂದೆರಡು ದಿನಗಳಲ್ಲಿ ನೀರಿನ ಅಭಾವವಿರುವ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮೂಲಕ ನಗರದಲ್ಲಿ ಉಂಟಾಗಿರುವ ನೀರಿನ ಬವಣೆ ತಪ್ಪಿಸಲು ಪಾಲಿಕೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.