ಬೆಂಗಳೂರು, ಏ.2- ರಾಜ್ಯದ ಎರಡನೆ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆಯವರೆಗೆ 72 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ.
ಇಂದು ಬಿಜಾಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ರಾವ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದರು.
ಬೀದರ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ನ ಹಲವು ನಾಯಕರು ಉಪಸ್ಥಿತರಿದ್ದರು.
ಏ.23ರಂದು ಮತದಾನ ನಡೆಯುವ ಎರಡನೆ ಹಂತದ ಲೋಕಸಭಾ ಕ್ಷೇತ್ರಗಳಾದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ನಿನ್ನೆಯವರೆಗೆ 98 ನಾಮಪತ್ರ ಸಲ್ಲಿಸಲಾಗಿದೆ.
69 ಪುರುಷ ಅಭ್ಯರ್ಥಿಗಳು ಹಾಗೂ ಮೂವರು ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಪರಿಶೀಲನೆ ಏ.5ರಂದು ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏ.8ರ ವರೆಗೂ ಕಾಲಾವಕಾಶವಿದೆ.ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ 241 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.