ಬೆಂಗಳೂರು, ಏ.2-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರಣಕಹಳೆ ಮೊಳಗಿಸಲಿದ್ದಾರೆ.
ಇದೇ 8 ರಂದು ನರೇಂದ್ರ ಮೋದಿ ಅವರು ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ಎರಡು ಕಡೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುವ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ರಾಜ್ಯದ 6 ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ ಎಂದು ಶಾಸಕ ಅರವಿಂದ ಲಿಂಬಾವಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ 13 ರಂದು ಮಂಗಳೂರು, ಬೆಂಗಳೂರು, 18 ರಂದು ಚಿಕ್ಕೋಡಿ ಮತ್ತು ಗಂಗಾವತಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇದೇ 10, 12, 17 ಹಾಗೂ 20 ರಂದು ಸೇರಿದಂತೆ ಒಟ್ಟು ರಾಜ್ಯದ 7 ಕಡೆ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.
ಅಮಿತ್ ಷಾ ಅವರು ದಾವಣಗೆರೆ, ಹಾಸನ, ತುಮಕೂರು, ಕೋಲಾರ, ಕಲಬುರಗಿ, ವಿಜಯಪುರ ಮತ್ತು ಧಾರವಾಡಗಳಲ್ಲಿ ಮತ ಯಾಚನೆಯಲ್ಲಿ ತೊಡಗುವರು.
ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತುಮಕೂರು, ಬೀದರ್ ಹಾಗೂ ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರು ಕಾರವಾರ, ಹಾವೇರಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್ ಅವರು ರಾಜ್ಯದಲ್ಲಿ ಪ್ರಚಾರ ನಡೆಸುವಂತೆ ಮನವಿ ಮಾಡಿದ್ದೇನೆ. ಆದರೆ ಇಲ್ಲಿಯವರೆಗೂ ದಿನಾಂಕ ನಿಗದಿಯಾಗಿಲ್ಲ.
ಅವರು ರಾಜ್ಯದ 5-6 ಕಡೆ ಪ್ರಚಾರ ನಡೆಸುವ ವಿಶ್ವಾಸ ನಮಗಿದೆ ಎಂದು ಲಿಂಬಾವಳಿ ಹೇಳಿದರು.
ರಚನಾತ್ಮಕ ಟೀಕೆ ಮಾಡಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ, ಬಿಎಸ್ವೈ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಟೀಕೆ ಮಾಡುವುದು ಸರ್ವೇಸಾಮಾನ್ಯ ಅದು ಆರೋಗ್ಯಕರವಾಗಿದ್ದರೆ ಒಳ್ಳೆಯದು ತೀರಾ ಕೆಳಮಟ್ಟದಲ್ಲಿ ಪ್ರಚಾರಕ್ಕೋಸ್ಕರ ಅಪಪ್ರಚಾರ ನಡೆಸಿದರೆ, ನಾವು ಅದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕಸಭಾ ಚುನಾವಣೆ ನಂತರ ಬಿ.ಎಸ್.ಯಡಿಯೂರಪ್ಪ ಅವರನ್ನು ಬಳಸಿಕೊಂಡು ಹೊರ ಹಾಕುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.ನೀವು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೀರಾ, ಇಲ್ಲವೆ, ಸುಳ್ಳು ಪ್ರಚಾರಕ್ಕಾಗಿ ಅಪಪ್ರಚಾರ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಸರ್ಕಾರದ ಲೋಪದೋಷಗಳು ಹಾಗೂ ಅಭಿವೃದ್ಧಿಯಲ್ಲಿ ವ್ಯತ್ಯಾಸವಾಗಿದ್ದರೆ ನೀವು ಟೀಕೆ ಮಾಡುವುದಕ್ಕೆ ಅಭ್ಯಂತರವಿಲ್ಲ. ಸುಳ್ಳು ಪ್ರಚಾರ ನಡೆಸುವ ಮೂಲಕವೇ ಪುಕ್ಕಟೆಯಾಗಿ ಪ್ರಚಾರ ಪಡೆಯುತ್ತೇನೆ ಎಂದರೆ ನಿಮಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ನೀವು ಏಕೆ ಮಾಡಲಿಲ್ಲ:
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ನಗರ ಬೆಳವಣಿಗೆ ಹಾಗೂ ಮೇಯರ್ ಇನ್ ಕೌನ್ಸಿಲ್ ಬಗ್ಗೆ ಮಾತನಾಡುತ್ತಿದ್ದಾರೆ.ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಆಡಳಿತದಲ್ಲಿದೆ. ಮೇಯರ್ ಇನ್ ಕೌನ್ಸಿಲ್ ಬಗ್ಗೆ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ಸರ್ಕಾರ ಏಕೆ ಅನುಷ್ಠಾನ ಮಾಡಿಲ್ಲ. ನಾವು ಬೆಂಗಳೂರು ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದೆವು. ಆದರೆ ಮೇಯರ್ ಇನ್ ಕೌನ್ಸಿಲ್ ಬಗ್ಗೆ ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ. ಸರ್ಕಾರ ಈಗಲಾದರೂ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ, ರಾಜೀವ್ ಚಂದ್ರಶೇಖರ್, ವಕ್ತಾರರಾದ ಪ್ರಕಾಶ್ ಮತ್ತು ಆನಂದ್ ಉಪಸ್ಥಿತರಿದ್ದರು.