ಮಂಡ್ಯ, ಏ.2- ಗ್ರಾಮಸ್ಥರಿಗೆ ಮತದಾನ ಹೇಗೆ ಮಾಡುವುದು ಹೇಗೆ ಎಂಬುದರ ಬಗ್ಗೆ ಬಂದ ಚುನಾವಣಾ ಸಿಬ್ಬಂದಿಗಳು ನಗೆಪಾಟಿಲಿಗೀಡಾಗಿ ವಾಪಸಾದ ಘಟನೆ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಇವಿಎಂ ಮಿಷನ್ ಹಿಡಿದುಕೊಂಡು ಎರಡು ವಾಹನಗಳಲ್ಲಿ ಬಂದಿದ್ದ ಸಿಬ್ಬಂದಿಗಳು ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಬಟನ್ ಒತ್ತುವ ಬಗ್ಗೆ ಹಾಗೂ ಅಭ್ಯರ್ಥಿಗಳ ಸಾಲು, ಚಿತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದರು.
ಆದರೆ ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಇಲ್ಲಿ ನೀವು ತೋರುತ್ತಿರುವ ಮಿಷನ್ನಲ್ಲಿ 16 ಜನರಿದ್ದಾರೆ ಏನಿದು ಎಂದು ಪ್ರಶ್ನಿಸಿದರು.
ಇದರಿಂದ ಗಲಿಬಿಲಿಗೊಂಡ ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಆದರೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡು ನೀವು ರಾಜಕೀಯ ಮಾಡಲು ಬಂದಿದ್ದೀರಾ? ಎಂದು ಏರು ದನಿಯಲ್ಲಿ ಟೀಕಿಸಲು ಆರಂಭಿಸಿದಾಗ ಮುಂದೆ ಮಾತನಾಡಲು ಸಾಧ್ಯವಾಗದೆ ಸಿಬ್ಬಂದಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸಾಗಿದ್ದಾರೆ.