ಬಳ್ಳಾರಿ, ಏ.2-ಕಳೆದ ಬಾರಿ ಲೋಕಸಭೆ ಚುನಾವಣೆಗಿಂತ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ಹೆಚ್ಚಾಗಿದ್ದು, ದೇಶದಲ್ಲಿ ಬಿಜೆಪಿ 300 ಸ್ಥಾನಗಳನ್ನು ಗಳಿಸಲಿದೆ.ರಾಜ್ಯದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಮೋದಿ ಅಲೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ಬಾರಿಗಿಂತ ಹೆಚ್ಚು ಬಹುಮತ ಗಳಿಸಿ ಬಿಜೆಪಿ ಅಧಿಕಾರ ಹಿಡಿಯಲಿದೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ನನ್ನ ಮೇಲೆ ಡೈರಿ ಸಂಬಂಧ ಸುಳ್ಳು ಆರೋಪ ಮಾಡಲಾಗಿದೆ.ಐಟಿ ಇಲಾಖೆಯವರು ಅದು ನಕಲಿ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಜಾದವ್ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿರುವ ಸ್ಪೀಕರ್ ರಮೇಶ್ಕುಮಾರ್ ಅವರ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿ ಪ್ರಚಾರ ಮಾಡುತ್ತೇವೆ. ನಾನು ಕೂಡ ಇದರಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಂಬಿ ಅವರ ಕೊಡುಗೆ ಏನೆಂದು ಮುಖ್ಯಮಂತ್ರಿಯವರು ಕೇಳುತ್ತಿದ್ದಾರೆ. ಅಂಬಿ ಅವರು ಬದುಕಿದ್ದಾಗ ಅವರನ್ನು ಹಾಡಿ ಹೊಗಳಿದ್ದರು ಎಂದು ಹೇಳಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬಂದಿತ್ತು. ನಮ್ಮ ತಪ್ಪು ನಮಗೆ ಮನವರಿಕೆಯಾಗಿದೆ. ಅದನ್ನು ಸರಿಪಡಿಸಿಕೊಂಡು ಈಗ ನಾವು ಬಳ್ಳಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ನಂತರ ರಾಜ್ಯಸರ್ಕಾರ ಪತನವಾಗಲಿದೆ. ಕಾಂಗ್ರೆಸ್-ಜೆಡಿಎಸ್ನವರ ಕಚ್ಚಾಟದಿಂದಲೇ ಸರ್ಕಾರ ಬಿದ್ದುಹೋಗಲಿದೆ ಎಂದು ಯಡಿಯೂರಪ್ಪ ಹೇಳಿದರು.