ಮೈಸೂರು, ಏ.2- ಮೈತ್ರಿ ಅಭ್ಯರ್ಥಿ ಪರ ಮೈಸೂರು-ಕೊಡಗು ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಮನವೊಲಿಸಲು ಕಾಂಗ್ರೆಸಿಗರು ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ.
ಆದರೆ ಜಿ.ಟಿ.ದೇವೇಗೌಡರು ಕಾಂಗ್ರೆಸಿಗರ ಯಾವ ಯತ್ನಕ್ಕೂ ಬಗ್ಗುತ್ತಿಲ್ಲ. ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಪರ ಪ್ರಚಾರಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಾಂಗ್ರೆಸ್ಸಿಗರು ಇನ್ನಿಲ್ಲವಂತೆ ಜಿಟಿಡಿಯ ಮನವೊಲಿಸಲು ಯತ್ನಿಸಿದ್ದಾರೆ ಆದರೆ ಜಿ.ಟಿ.ದೇವೇಗೌಡರು ಇವರ ಮನವಿಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.
ಇಂದು ಬಂದು ನಾಳೆಯಿಂದ ಪ್ರಚಾರಕ್ಕೆ ಬನ್ನಿ ಎಂದರೆ ಹೇಗೆ ನಮಗೂ ಹಲವು ಕೆಲಸ ಕಾರ್ಯ ಇರುತ್ತವೆ ಎಂದು ಸಬೂಬು ಹೇಳಿದ್ದಾರೆ.
ಜಿಟಿಡಿ ಮುನಿಸಿಕೊಂಡಿರುವುದರಿಂದ ಪ್ರಚಾರ ಕಾರ್ಯದಲ್ಲಿ ಭಾಗಹಿಸುತ್ತಿಲ್ಲ ಎಂಬುದು ಗುಟ್ಟಿನ ವಿಷಯವೇನು ಅಲ್ಲ. ಆದರೆ ಜೆಡಿಎಸ್-ಕಾಂಗ್ರೆಸ್ ಒಂದಾಗಿ ಅಭ್ಯರ್ಥಿಯನ್ನು ಮೈಸೂರು ಚುನಾವಣಾ ಕಣದಲ್ಲಿ ಸ್ಪರ್ಧೆಗಿಳಿಸಿರುವುದರಿಂದ ಜಿಟಿಡಿ ಪ್ರಚಾರದಲ್ಲಿ ಭಾಗವಹಿಸುವುದು ಅತ್ಯವಶ್ಯಕವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಜಿಟಿಡಿ ಅವರ ಪ್ರಭಾವ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು ಹಾಗಾಗಿ ಕಾಂಗ್ರೆಸಿಗರು ಜಿ.ಟಿ.ದೇವೇಗೌಡರನ್ನು ಬಿಟ್ಟು ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸುವುದು ಕಷ್ಟ ಸಾಧ್ಯ.
ಹಾಗಾಗಿ ಶತಾಯ ಗತಾಯ ಜಿ.ಟಿ.ದೇವೇಗೌಡರನ್ನು ಹೇಗಾದರೂ ಮಾಡಿ ಒಪ್ಪಿಸಿ ವಿಜಯಶಂಕರ್ ಅವರ ಪರ ಮತಯಾಚನೆಗೆ ಕರೆ ತರಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.
ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ನಂತರದಲ್ಲಿ ಈವರೆಗೂ ಯಾವುದೇ ಕಾಂಗ್ರೆಸ್ಸಿಗರೂ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿಲ್ಲ ತಮ್ಮ ಅಭ್ಯರ್ಥಿ ಪರ ಮತ ಯಾಚನೆಗೆ ಆಗಮಿಸುವಂತೆ ಕೇಳಿರಲಿಲ್ಲ ಇದರಿಂದಲೂ ಬೇಸರಗೊಂಡಿರುವ ಅವರು ಇನ್ನು ಮುನಿಸಿನಿಂದ ಹೊರ ಬಂದಂತೆ ಕಾಣುತ್ತಿಲ್ಲ.
ಒಂದು ಕಡೆ ತಮ್ಮ ಅಭ್ಯರ್ಥಿಯನ್ನು ಮೈಸೂರಿನಲ್ಲಿ ಕಣಕ್ಕಿಳಿಸಲಿಲ್ಲ ಎಂಬುದು ಒಂದಾದರೆ ಕಾಂಗ್ರೆಸ್ಸಿಗರು ನನ್ನನ್ನೂ ನಿರ್ಲಕ್ಷಿಸುತ್ತಿದ್ದಾರೆ ಎಂಬ ಕಾರಣಗಳು ಅವರು ಪ್ರಚಾರದಲ್ಲಿ ಪಾಲ್ಗೊಳ್ಳದಿರಲು ಕಾರಣ ಎನ್ನಲಾಗುತ್ತಿದೆ.