ತುಮಕೂರು,ಏ.2- ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಜನರು ಇದಕ್ಕೆ ಸಹಕಾರ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ಮನವರಿಕೆಯಾಗಿದೆ. ಜಿಲ್ಲೆಯ ಜನರಿಗೆ ಅಥವಾ ರೈತರಿಗೆ ನನ್ನಿಂದ ಯಾವುದೇ ತೊಡಕ್ಕಾಗಿಲ್ಲ. ಕೆಲವರು ಕೆಲ ವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಂಡು ಆರೋಪಿಸುತ್ತಿದ್ದಾರೆ.
ಇಂದಿರಾಗಾಂಧಿ ಪ್ರಧಾನಿಯಾದ ಸಂದರ್ಭದಿಂದಲೂ ಸಾಕಷ್ಟು ನೀರಾವರಿ ಹೋರಾಟ ಮಾಡುತ್ತಾ ಬಂದಿದ್ದೇನೆ. ವಿಶೇಷವಾಗಿ ರೈತರಿಗೋಸ್ಕರವೇ ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ. ಜಲಾಶಯ ನಿರ್ಮಾಣ ಸೇರಿದಂತೆ ರೈತರ ಅಭಿವೃದ್ಧಿಗೆ ಒತ್ತುಕೊಟ್ಟಿದ್ದೇನೆ. ನನ್ನ ಹೋರಾಟ ನಿರಂತರವಾಗಿದೆ. ಆದರೆ ಕೆಲವರು ಅನಗತ್ಯವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ .ಅದು ಸತ್ಯಕ್ಕೆ ದೂರವಾದ ಸಂಗತಿ ಎಂದರು.
ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನೆಲಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ. ಎಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆಗಳನ್ನು ಬಗೆಹರಿಸೋಣ. ಜಿಲ್ಲೆಯಲ್ಲಿ ನನಗೆ ಉತ್ತಮ ಸ್ಪಂದನೆ ಸಿಕ್ಕಿದೆ.ಜನರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಎಲ್ಲರೂ ನಮಗೆ ಸ್ಪಂಧಿಸಿದ್ದಾರೆ ಎಂದರು.
ಬೆಳಗ್ಗೆ ಪಟ್ಟನಾಯಕಹಳ್ಳಿಯಲ್ಲಿ ನಂಜಾವಧೂತ ಶ್ರೀಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಚಿಕ್ಕನಾಯಕನಹಳ್ಳಿಯಲ್ಲಿ ಮುಖಂಡರ ಸಭೆಯಲ್ಲಿ ಭಾಗವಹಿಸಿ ಬಂದಿದ್ದೆ ತಡವಾಗಿದೆ. ಉತ್ತಮ ಸ್ಪಂದನೆ ಸಿಕ್ಕಿದೆ.
ಉಪಮುಖ್ಯಮಂತ್ರಿ ಪರಮೇಶ್ವರ್ , ಮಾಜಿ ಶಾಸಕರಾದ ಡಾ.ರಫೀಕ್ ಅಹಮ್ಮದ್, ಸಣ್ಣ ಕೈಗಾರಿಕಾ ಸಚಿವ ಎಸ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮುಖಂಡರಾದ ಎಚ್.ಮುನಿಯಪ್ಪ, ಗೋವಿಂದರಾಜ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಮಕೃಷ್ಣಯ್ಯ ಮತ್ತಿತರರು ಇದ್ದರು.