ಬೆಂಗಳೂರು, ಏ.2- ಧಾರವಾಡ ಲೋಕಸಭಾ ಕ್ಷೇತ್ರದಿಂದ ಶಾಕೀರ್ ಸನದಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಈ ಮೊದಲೆಲ್ಲ ಹಾವೇರಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸುವ ಪರಿಪಾಠ ಬೆಳೆದುಬಂದಿತ್ತು. ಆದರೆ ಈ ಬಾರಿ ಹಾವೇರಿಯಿಂದ ಡಿ.ಆರ್.ಪಾಟೀಲ್ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಧಾರವಾಡ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಬಿಜೆಪಿಯ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಕುಂದಗೋಳ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರು ಗೆದ್ದಿದ್ದರು. ಅದರಲ್ಲಿ ಕುಂದಗೋಳ ಕ್ಷೇತ್ರದ ಶಾಸಕ ಹಾಗೂ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಇತ್ತೀಚೆಗೆ ಅಕಾಲಿಕ ನಿಧನಕ್ಕೀಡಾದರು. ಹಾವೇರಿಯ ಶಿಗ್ಗಾವಿ ಸೇರಿದಂತೆ ಉಳಿದ 5 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದಾರೆ.
ಮಾಜಿ ಸಚಿವ ವಿನಯ್ಕುಲಕರ್ಣಿ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಲೋಕಸಭೆ ಮೇಲೆ ಕಣ್ಣಿಟ್ಟಿದ್ದರು.ಸದಾನಂದ ಡಂಗನವರ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರ ಬದಲಿಗೆ ಕಾಂಗ್ರೆಸ್ ಮಾಜಿ ಸಂಸದ ಐ.ಜಿ.ಸನದಿ ಅವರ ಪುತ್ರ ಶಾಕೀರ್ ಸನದಿಯವರ ಕಣಕ್ಕಿಳಿಸಲು ಮುಂದಾಗಿದೆ ಎಂಬ ಮಾಹಿತಿ ಇದೆ. ಆದರೆ ಸಿದ್ದರಾಮಯ್ಯ ಅವರು ವಿನಯ್ಕುಲಕರ್ಣಿ ಪರವಾದ ಒಲವು ಹೊಂದಿದ್ದು, ಇಂದು ಸಂಜೆಯೊಳಗಾಗಿ ಹೈಕಮಾಂಡ್ನಿಂದ ಅಂತಿಮ ನಿರ್ಧಾರ ಹೊರಬೀಳಲಿದೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿರುವ ಶಾಕೀರ್ ಸನದಿ ಅವರು, ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರಿಕಾಪ್ರಕಟಣೆ ನಕಲಿಯಾಗಿದೆ.ದಯವಿಟ್ಟು ಯಾರೂ ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ. ಹೈಕಮಾಂಡ್ ನಿರ್ಧಾರ ಪ್ರಕಟಿಸುವವರೆಗೂ ಅನಗತ್ಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
ದಿಢೀರ್ ಬೆಳವಣಿಗೆಯಲ್ಲಿ ಡಾ.ಸೀಮಾ ಸಾದಿಕ್ ಅವರ ಹೆಸರು ಚಾಲನೆಗೆ ಬಂದಿದೆ.ನಮ್ಮ ಮಿತ್ರ ಫೌಂಡೇಶನ್ನ ಮುಖ್ಯಸ್ಥರಾಗಿರುವ ಸೀಮಾ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿದ್ದು, ರಾಜ್ಯದ ಕೆಲವು ನಾಯಕರು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿರುವ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಅವರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದು ವೇಳೆ ಅವರು ಸ್ಪರ್ಧಿಸಲು ಸ್ಪಷ್ಟವಾಗಿ ನಿರಾಕರಿಸಿದರೆ ಈ ಕ್ಷೇತ್ರದಿಂದ ಮಂಜಪ್ಪ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗಿದೆ.