ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಈ ನಡುವೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆಮಾಡಿದೆ.

ಕಾಂಗ್ರೆಸ್​ನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ”ನಾವು ಭರವಸೆ ಈಡೇರಿಸುತ್ತೇವೆ” ಎಂಬ ಶೀರ್ಷಿಕೆಯ 2019ರ ಲೋಕಸಭಾ ಚುನಾವಣೆ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಬಿಡುಗಡೆ ಮಾಡಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಉಪಸ್ಥಿತಿಯಲ್ಲಿ 27 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಉದ್ಯೋಗ ಸೃಷ್ಟಿ, ರೈತರ ಹಿತರಕ್ಷಣೆ ಮತ್ತು ಮಹಿಳೆಯರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜತೆಗೆ ಕಡುಬಡವರಿಗೆ ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯ ದೊರಕಿಸಿಕೊಡುವ ನ್ಯಾಯ್​ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ನಾವು ಸುಳ್ಳು ಭರವಸೆಗಳನ್ನು ನೀಡುತ್ತಿಲ್ಲ. ನಾವು ಜನರ ಬಯಕೆಗಳನ್ನು ಇದರಲ್ಲಿ ಸೇರ್ಪಡೆಗೊಳಿಸಿದ್ದೇವೆ. ಪ್ರಣಾಳಿಕೆಯ ಯಾವೊಂದು ವಿಚಾರವೂ ಹುಸಿಯಾಗಲು ಬಿಡೆನು ಎಂದು ಹೇಳಿದರು.

ನ್ಯಾಯ್​ ಯೋಜನೆಯ ಮೂಲಕ ಬಡವರ ಜೇಬಿನಲ್ಲಿ ದುಡ್ಡು ಇರುವಂತೆ ಮಾಡಲಿದ್ದೇವೆ. ನೋಟು ಅಮಾನ್ಯೀಕರಣದಿಂದಾಗಿ ಉಂಟಾಗಿರುವ ಆರ್ಥಿಕ ಹಿಂಜರಿಕೆ ಸಮಸ್ಯೆ ಪರಿಹಾರವಾಗಲಿದೆ. ರಾಷ್ಟ್ರದಲ್ಲಿ ಒಟ್ಟು 22 ಲಕ್ಷ ಹುದ್ದೆಗಳು ಖಾಲಿಯಿದೆ. ನಾವು ಅಧಿಕಾರಕ್ಕೆ ಬರುತ್ತಲೇ ನೇಮಕಾತಿ ಪ್ರಕ್ರಿಯೆ ನಡೆಸಿ, 2020ರ ವೇಳೆಗೆ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ರಾಹುಲ್ ಭರವಸೆ ನೀಡಿದ್ದಾರೆ.

Congress releases manifesto for 2019 Lok Sabha elections

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ