ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಈ ನಡುವೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆಮಾಡಿದೆ.
ಕಾಂಗ್ರೆಸ್ನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ”ನಾವು ಭರವಸೆ ಈಡೇರಿಸುತ್ತೇವೆ” ಎಂಬ ಶೀರ್ಷಿಕೆಯ 2019ರ ಲೋಕಸಭಾ ಚುನಾವಣೆ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತಿಯಲ್ಲಿ 27 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ಉದ್ಯೋಗ ಸೃಷ್ಟಿ, ರೈತರ ಹಿತರಕ್ಷಣೆ ಮತ್ತು ಮಹಿಳೆಯರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜತೆಗೆ ಕಡುಬಡವರಿಗೆ ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯ ದೊರಕಿಸಿಕೊಡುವ ನ್ಯಾಯ್ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ನಾವು ಸುಳ್ಳು ಭರವಸೆಗಳನ್ನು ನೀಡುತ್ತಿಲ್ಲ. ನಾವು ಜನರ ಬಯಕೆಗಳನ್ನು ಇದರಲ್ಲಿ ಸೇರ್ಪಡೆಗೊಳಿಸಿದ್ದೇವೆ. ಪ್ರಣಾಳಿಕೆಯ ಯಾವೊಂದು ವಿಚಾರವೂ ಹುಸಿಯಾಗಲು ಬಿಡೆನು ಎಂದು ಹೇಳಿದರು.
ನ್ಯಾಯ್ ಯೋಜನೆಯ ಮೂಲಕ ಬಡವರ ಜೇಬಿನಲ್ಲಿ ದುಡ್ಡು ಇರುವಂತೆ ಮಾಡಲಿದ್ದೇವೆ. ನೋಟು ಅಮಾನ್ಯೀಕರಣದಿಂದಾಗಿ ಉಂಟಾಗಿರುವ ಆರ್ಥಿಕ ಹಿಂಜರಿಕೆ ಸಮಸ್ಯೆ ಪರಿಹಾರವಾಗಲಿದೆ. ರಾಷ್ಟ್ರದಲ್ಲಿ ಒಟ್ಟು 22 ಲಕ್ಷ ಹುದ್ದೆಗಳು ಖಾಲಿಯಿದೆ. ನಾವು ಅಧಿಕಾರಕ್ಕೆ ಬರುತ್ತಲೇ ನೇಮಕಾತಿ ಪ್ರಕ್ರಿಯೆ ನಡೆಸಿ, 2020ರ ವೇಳೆಗೆ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ರಾಹುಲ್ ಭರವಸೆ ನೀಡಿದ್ದಾರೆ.
Congress releases manifesto for 2019 Lok Sabha elections