ಬೆಳಗಾವಿ,ಏ.1- ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸೋದರನಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಶಾಸಕ ಉಮೇಶ್ ಕತ್ತಿ ಗರಂ ಆಗಿದ್ದು, ಬಂಡಾಯದ ಬಾವುಟ ಹಾರಿಸಲು ಸಿದ್ಧತೆ ನಡೆಸಿದ್ದಾರೆ.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಮೇಶ್ ಕತ್ತಿಯನ್ನು ಕಣಕ್ಕಿಳಿಸಲು ಸರ್ವ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದ್ದು, ಉಮೇಶ್ ಕತ್ತಿಯ ಜತೆಗೆ ಇನ್ನು ಮೂವರು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದ್ದು , ಬಿಜೆಪಿ ಇದು ದೊಡ್ಡ ಆಘಾತ ತಂದಿದೆ.
ತಾವೇ ಸಾಕಿದ ಗಿಣಿಗಳು ತಮ್ಮನ್ನೇ ಕುಕ್ಕುತ್ತಿವೆ. ಮುಂದಿನ ದಿನಗಳಲ್ಲಿ ರಾಜಕಾರಣ ಮತ್ತಷ್ಟು ಹದಗೆಡಲಿದೆ.ಅದಕ್ಕೆ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು.ಜತೆಗೆ ಶಾಂತಿಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಉಮೇಶ ಕತ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಯುಗಾದಿಗೆ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಲಿದೆ.ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿದ್ದಕ್ಕೆ ಹೊಸ ತಂತ್ರವೊಂದನ್ನು ರೂಪಿಸಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲಿದ್ದೇನೆ ಎಂದಿರುವ ಶಾಸಕ ಉಮೇಶ್ ಕತ್ತಿ ಗುಟ್ಟು ಬಿಟ್ಟು ಕೊಡದೆ ಯಾವುದಕ್ಕೂ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.
ಬೆಳಗಾವಿ ವಿಭಾಗದಲ್ಲಿ ಬಿಜೆಪಿಗೆ ಭದ್ರ ಬುನಾದಿ ಇದ್ದು , 18 ಮಂದಿ ಶಾಸಕರು ಇದ್ದಾರೆ. ಅದರಲ್ಲಿ ಉಮೇಶ್ ಕತ್ತಿ ಪ್ರಭಾವ ಹೆಚ್ಚಾಗಿಯೇ ಇದೆ.ಇದನ್ನು ಅರಿತಿರುವ ಬಿ.ಎಸ್.ಯಡಿಯೂರಪ್ಪ ಸಂಧಾನ ನಡೆಸಲು ಈಗಾಗಲೇ ಚಿಕ್ಕೋಡಿಗೆ ಭೇಟಿ ನೀಡಿದ್ದಾರೆ.
ಕೊನೆಯ ಕ್ಷಣದಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಪ್ರಸ್ತುತ ಬಿಜೆಪಿಯಿಂದ ಟಿಕೆಟ್ ನೀಡಿರುವ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಬದಲಾಯಿಸುವ ಸಾಧ್ಯತೆಗಳು ದಟ್ಟವಾಗಿದೆ.
ಕೈ ಆಪರೇಷನ್: ಚಿಕ್ಕೋಡಿಯಲ್ಲಿ ಬಿಜೆಪಿ ಬಂಡಾಯದ ಲಾಭ ಪಡೆಯಲು ಕಾಂಗ್ರೆಸ್ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ. ಸಚಿವ ಸತೀಶ್ ಜಾರಕಿಹೊಳಿ ರಂಗ ಪ್ರವೇಶಿಸಿದ್ದು , ಉಮೇಶ್ ಕತ್ತಿ ಅವರನ್ನು ಸೆಳೆಯಲು ತಮ್ಮದೇ ಆದ ತಂತ್ರ ಆರಂಭಿಸಿದ್ದಾರೆ.
ರಮೇಶ್ ಕತ್ತಿಗೆ ಕಾಂಗ್ರೆಸ್‍ನಿಂದ ಟಿಕೆಟ್ ನೀಡಿ ಅಖಾಡಕ್ಕೆ ಇಳಿಸಲು ಸಿದ್ಧತೆ ಕೂಡ ನಡೆಯುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಇನ್ನೆರಡು ಮೂರು ದಿನಗಳಲ್ಲಿ ಸ್ಪಷ್ಟವಾಗಲಿದೆ.