ಬೆಂಗಳೂರು,ಏ.1- ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿದೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಗುಜರಾತ್ನಲ್ಲಿ 26ಕ್ಕೆ 26ರಲ್ಲೂ ಗೆದ್ದಿತ್ತು. ಆದರೆ ಈ ಬಾರಿ ಅದು ಸಾಧ್ಯವಿಲ್ಲ.
ಮೋದಿಯವರು ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಜನರ ಖಾತೆಗೆ 15 ಲಕ್ಷ ರೂ.ಹಾಕುವುದು ಸೇರಿದಂತೆ ಹಲವಾರು ಭರವಸೆಗಳು ಹುಸಿಯಾಗಿವೆ. ಯಾವುದೇ ಸರ್ಕಾರ ತಾನು ಮಾಡಿದ ಅಭಿವೃದ್ದಿ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಪ್ರಚಾರ ಮಾಡಬೇಕು, ಆದರೆ ಮೋದಿಯವರು ರಾಮಮಂದಿರ, ದೇಶಭಕ್ತಿ, ಚೌಕಿದಾರ್ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ.
ರೈತರ ಸಾಲಮನ್ನಾವನ್ನು ಲಾಲಿಪಪ್ ಎಂದು ಜರಿಯುತ್ತಾರೆ. ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಾರೆ. ವಾಜಪೇಯಿ ಸರ್ಕಾರದಲ್ಲಿ ಇಂಡಿಯಾ ಶೈನಿಂಗ್ ಎಂದಿದ್ದರು. ತದನಂತರ ಅದು ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.
ರಾಹುಲ್ ಗಾಂಧಿ ಘೋಷಿಸಿರುವ ಕನಿಷ್ಟ ಆದಾಯ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಬಿಜೆಪಿಯವರು ಸಮಾನತೆ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು, ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಾರೆ, ಅಭಿವೃದ್ದಿ ವಿಷಯಗಳನ್ನು ಚರ್ಚೆ ಮಾಡುವ ಬದಲಿಗೆ ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಭಾಷಣ ಮಾಡುತ್ತಾರೆ.
ಈ ಹಿಂದೆ ಕೂಡ ಸಾಕಷ್ಟು ಸರ್ಜಿಕಲ್ ಸ್ಟ್ರೈಕ್ಗಳಾಗಿವೆ. ಯಾರೂ ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಅವರು ಚೌಕಿದಾರ್ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಲೇವಡಿ ಮಾಡಿದ ಸಿದ್ದರಾಮಯ್ಯ, ಜನ ಮತ ಹಾಕಿ ಆಯ್ಕೆ ಮಾಡಿದ ಮೇಲೆ ಪ್ರತಿಯೊಬ್ಬರೂ ದೇಶದ ಕಾವಲುಗಾರರೇ.ಆದರೆ ಮೋದಿ ಅವರ ಪ್ರಚಾರದಲ್ಲಿ ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ ಅವರಂತವರೂ ಚೌಕಿದಾರರಾಗಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ 44 ಯೋಧರು ಹುತಾತ್ಮರಾದಾಗ ಕೇಂದ್ರ ಸರ್ಕಾರದ ಸಂಸ್ಥೆಗಳು ಸತ್ತುಹೋಗಿದ್ದವೇ ಎಂದು ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಲೋಕಪಾಲ ರಚಿಸುವುದು, ರೈತರಿಗೆ ವರ್ಷಕ್ಕೆ 6ಸಾವಿರ ನೀಡುವುದಾಗಿ ಘೋಷಿಸಿದರು. ಇಂಥ ಎಲ್ಲ ಗಿಮಿಕ್ಗಳು ಜನರಿಗೆ ಅರ್ಥವಾಗುತ್ತದೆ.ಜನ ಭಾವನಾತ್ಮಕವಾಗಿ ಮರಳಾಗುವುದಿಲ್ಲ. ಕಾಂಗ್ರೆಸ್ಗೆ ವೋಟ್ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್ವೈ ಡೈರಿ ತನಿಖೆ ಮುಗಿದಿಲ್ಲ:
ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಯಡಿಯೂರಪ್ಪನವರ ಡೈರಿ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿ ಬಾಲಕೃಷ್ಣ ಅವರು ಹೇಳಿಕೆ ನೀಡಿ ಅದು ನಕಲಿ ಎಂದಿದ್ದಾರೆ. ತನಿಖೆ ನಡೆದು ಸಾಬೀತಾಗುವವರೆಗೂ ಅಧಿಕಾರಿಗಳು ಹೇಳಿಕೆ ನೀಡುವಂತಿಲ್ಲ. ಡೈರಿಯಲ್ಲಿ ಯಡಿಯೂರಪ್ಪನವರ ಸಹಿ ಇದೆ.ಅದು ಅಸಲಿಯೋ, ನಕಲಿಯೋ ಎಂಬ ಬಗ್ಗೆ ತನಿಖೆ ನಡೆಸಲು ಪೋರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬರುವ ಮೊದಲೇ ಅಧಿಕಾರಿ ಹೇಳಿಕೆ ನೀಡಿದ್ದು ಹೇಗೆ?ಅವರ ಮೇಲೆ ಯಾರ ಒತ್ತಡವಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಗೋವಿಂದರಾಜು ಅವರ ಡೈರಿ ಪ್ರಕರಣ ತನಿಖೆಯಾಗಿದೆ. ಡೈರಿ ಗೋವಿಂದರಾಜು ಅವರಿಗೆ ಸೇರಿದ್ದಲ್ಲ ಎಂಬುದು ಇತ್ಯರ್ಥವಾಗಿದೆ. ಆದರೆ ಯಡಿಯೂರಪ್ಪ ಅವರ ಡೈರಿಯ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಐಟಿ ದಾಳಿಗಾಗಲಿ, ಸಿಬಿಐ ತನಿಖೆಗಾಗಲಿ ನನ್ನವಿರೋಧವಿಲ್ಲ. ದಾಳಿಗೆ ಒಳಗಾದವರ ಪರವಾಗಿ ವಕಾಲತ್ತನ್ನು ವಹಿಸುವುದಿಲ್ಲ. ಈ ಸಂಸ್ಥೆಗಳಿರುವುದೇ ತೆರಿಗೆ ತಪ್ಪಿಸುವವರನ್ನು, ಅಕ್ರಮ ಮಾಡುವವರನ್ನು ತನಿಖೆಗೊಳಪಡಿಸಲು. ಆದರೆ ಕೇಂದ್ರ ಸರ್ಕಾರ ಇವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.ಕಾಂಗ್ರೆಸ್-ಜೆಡಿಎಸ್ ಮೇಲೆ ಮಾತ್ರ ದಾಳಿ ನಡೆಯುತ್ತಿದೆ.ಯುಡಿಯೂರಪ್ಪ ಮತ್ತು ಬಿಜೆಪಿಯವರ ಮನೆ ಮೇಲೆ ಏಕೆ ದಾಳಿಯಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕುಟುಂಬ ರಾಜಕಾರಣವನ್ನು ಜನರೇ ಒಪ್ಪಿಕೊಂಡಿದ್ದಾರೆ.ಜನ ಒಪ್ಪಿದ ಮೇಲೆ ಅದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.