ಬೆಂಗಳೂರು,ಏ.1-ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ಗೆ ಹೈಕೋರ್ಟ್ ಇಂದು ಕೂಡ ಜಾಮೀನು ಮಂಜೂರು ಮಾಡಿಲ್ಲ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಗೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಗಣೇಶ್ ಪರ ವಕೀಲ ಶ್ಯಾಮ್ಸುಂದರ್ ಹೈಕೋರ್ಟ್ಗೆ ಮನವಿ ಮಾಡಿದರು.
ಆದರೆ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಏ.8ಕ್ಕೆ ಮುಂದೂಡಿದ್ದರಿಂದ ಗಣೇಶ್ ಇಂದು ಬಿಡುಗಡೆಯಾಗಬಹುದೆಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ.
ತಮ್ಮ ಕಕ್ಷಿದಾರರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳ ಬೇಕಾಗಿರುವುದರಿಂದ ಹಾಗೂ ಅವರ ಲಭ್ಯತೆ ಕ್ಷೇತ್ರದ ಮತದಾರರಿಗೆ ಅಗತ್ಯವಾಗಿದೆ ಎಂದು ಶ್ಯಾಮ್ಸುಂದರ್ ನ್ಯಾಯಾಧೀಶರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
ಜನಪ್ರತಿನಿಧಿ ಚುನಾವಣಾ ಸಂದರ್ಭದಲ್ಲಿ ಲಭ್ಯವಿದ್ದರೆ ಮತದಾರರ ಮೇಲೆ ಉಂಟಾಗುವ ಪರಿಣಾಮವೇ ಬೇರೆಯದ್ದು. ಈಗ ಅವರ ಲಭ್ಯತೆ ಇರುವ ಕಾರಣ ನ್ಯಾಯಾಲಯ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಲು ಮನಸ್ಸು ಮಾಡಬೇಕೆಂದು ಅವರು ಕೋರಿಕೊಂಡರು. ಆದರೆ ಇದಕ್ಕೆ ಸೊಪ್ಪು ಹಾಕದ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಮುಂದೂಡಿದರು.
ಈಗಾಗಲೇ ಸೆಷನ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.
ಆಪರೇಷನ್ ಕಮಲ ತಪ್ಪಿಸುವ ಕಾರಣಕ್ಕಾಗಿ ಕಾಂಗ್ರೆಸ್ನ ಶಾಸಕರನ್ನು ಬಿಡದಿ ಸಮೀಪವಿರುವ ಈಗಲ್ಟನ್ ರೆಸಾರ್ಟ್ಗೆ ಕರೆದೊಯ್ಯಲಾಗಿತ್ತು. ಈ ವೇಳೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಜೆ.ಗಣೇಶ್ ನಡುವೆ ಮಾತಿನ ಚಕಮಕಿ ನಡೆಯಿತು.
ಹೀಗೆ ಮುಂದುವರೆದ ವಾಕ್ಸಮರದಲ್ಲಿ ಜೆ.ಎನ್.ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಲವು ದಿನಗಳ ತನಕ ತಲೆಮರೆಸಿಕೊಂಡಿದ್ದರು. ಬಳಿಕ ಕರ್ನಾಟಕದ ಒಂದು ತಂಡ ಗುಜರಾತ್ಗೆ ತೆರಳಿ ಅಲ್ಲಿಂದ ಬಂಧಿಸಲಾಯಿತು.ನಂತರ ಅವರಿಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.