
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಹನ ಕಳ್ಳರ ಸಂಖ್ಯೆ ಹೆಚ್ಚಾಗಿದ್ದು, ತುಂಬಾ ಆಸೆ ಪಟ್ಟು ತೆಗೆದುಕೊಂಡ ಕಾರು, ಬೈಕ್‍ಗಳು ಖದೀಮರ ಪಾಲಾಗುತ್ತಿವೆ. ಹೀಗಾಗಿ ಈ ವಾಹನ ಕಳ್ಳರಿಗೆ ಕಡಿವಾಣ ಹಾಕಲು, ಸುಪ್ರೀಂಕೋರ್ಟ್ ನ ಆದೇಶದಂತೆ ಕೇಂದ್ರ ಸರ್ಕಾರ ಮುಂದಾಗಿದೆ.
ಹೌದು. ಸುಪ್ರೀಂಕೋರ್ಟ್ ನ ಆದೇಶದಂತೆ ಇಂದಿನಿಂದ ಮಾರಾಟವಾಗುವ ಹೊಸ ವಾಹನಗಳಿಗೆ ಈ ಹೈ-ಸೆಕ್ಯೂರಿಟಿ ನಂಬರ್ಸ್ ರಿಜಿಸ್ಟ್ರೇಷನ್ ಪ್ಲೇಟ್ಸ್ ಸಿಗಲಿದೆ.
ಇದು ಹಲವು ವೈಶಿಷ್ಟ್ಯಗಳನ್ನ ಹೊಂದಿದ್ದು, ವಾಹನ ಮಾಲೀಕರಿಗೆ ಉಪಯೋಗವಾಗಲಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ತಿಳಿಸಿದ್ದಾರೆ.
ಹೊಸ ವಾಹನ ತಯಾರಕರು ಅಥವಾ ವಿತರಕರು ಈ ನಂಬರ್ ಪ್ಲೇಟ್‍ಗೆ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕಿದೆ. ಈ ನಂಬರ್ ಪ್ಲೇಟ್‍ಗಳಿಂದ ಕಳೆದು ಹೋದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚ ಬಹುದಾಗಿದೆ. ಈಗ ಚುನಾವಣೆ ಸಮಯವಾಗಿರುವುದರಿಂದ ನಗರದ ಎಲ್ಲೆಡೆಯೂ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಆದರೂ ಹಣ ಸೇರಿದಂತೆ ಅನೇಕ ಬೆಲೆ ಬಾಳುವ ವಸ್ತುಗಳನ್ನು ನಂಬರ್ ಪ್ಲೇಟ್ ಬದಲಿಸಿ ಸಾಗಿಸುವ ಸಾಧ್ಯತೆ ಇರುತ್ತದೆ. ಈ ಅಕ್ರಮಗಳಿಗೆ ಈ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳು ಬ್ರೇಕ್ ಹಾಕುತ್ತವೆ ಎಂದು ಚೆಕ್‍ಪೋಸ್ಟ್ ತಪಾಸಣಾ ಅಧಿಕಾರಿ ಚಂದ್ರಶೇಖರ್ ಹೇಳಿದ್ದಾರೆ.
ಈ ಸೌಲಭ್ಯವನ್ನು ಹಳೆಯ ವಾಹನಗಳಿಗೂ ಅಳವಡಿಸಬೇಕೆಂದು ವಾಹನ ಸವಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.