ಮಂಡ್ಯ; ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಡ ಹೇರಿದ್ದಾರೆ ಎಂಬ ಸುಮಲತಾ ಅಂಬರೀಶ್ ಆರೋಪಕ್ಕೆ ಮಂಡ್ಯ ಜಿಲ್ಲಾಧಿಖಾರಿ ಮಂಜುಶ್ರೀ ಸ್ುಮಲತಾ ಅವರಿಗೆ ನೀಡಿದ್ದ ನೋಟೀಸ್ ಗೆ ಲಿಖಿತ ಉತ್ತರ ನೀಡಿರುವ ಸುಮಲತಾ ಅಂಬರೀಶ್, ನಿಮ್ಮ ನೋಟೀಸ್ ಕಾನೂನು ಬಾಹಿರವಾದದ್ದು ಎಂದಿದ್ದಾರೆ.
ಡಿ ಸಿ ಮಂಜುಶ್ರೀ ನೋಟೀಸ್ ಗೆ ಉತ್ತರಿಸಿರುವ ಸುಮಲತಾ, ನಾನು ಹೇಳಿರುವ ಮಾತುಗಳೆಲ್ಲ ವಾಸ್ತವಾಂಶಕ್ಕೆ ಅನುಗುಣವಾಗಿವೆ. ನಿಮ್ಮ ಹಾಗೂ ನಿಮ್ಮ ಸಿಬ್ಬಂದಿ ನಡವಳಿಕೆ ನೋಡಿ ಆ ಮಾತು ಹೇಳಿದ್ದೇನೆ. ನಾನು ಯಾರನ್ನು ವ್ಯಕ್ತಿಗತವಾಗಿ ಅವಹೇಳನ ಮಾಡಿಲ್ಲ ಎಂದು ಉಲ್ಲೇಖಿಸಿದ್ದಾರೆ.
ನಿಖಿಲ್ ನಾಮಪತ್ರ ಅರ್ಜಿ ಪರಿಶೀಲನೆಯ ವಿಡಿಯೋ ಕೇಳಿದರೆ ನೀವು ಒಂದು ತುಣುಕು ಮಾತ್ರ ಕೊಟ್ಟಿದ್ದೀರಿ ಇದು ಕರ್ತವ್ಯಲೋಪವಲ್ಲವೇ? ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ. ನಿಮ್ಮ ತಪ್ಪುಗಳನ್ನು ಮಾಧ್ಯಮದ ಮುಂದೆ ಹೇಳಿದ್ದೇನೆ.
ಇದು ನನ್ನ ಹಕ್ಕು ಊಹಾಪೋಹದ ಮಾಹಿತಿ ಆಧರಿಸಿ ನಾನು ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಅಪರಾಧ ನಾನು ಮಾಡಿಲ್ಲ ಎಂದು ಹೇಳಿದ್ದಾರೆ.
ತಾವು ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದ್ದು, ಇದನ್ನು ಈ ಹಂತದಲ್ಲೇ ಕೈಬಿಟ್ಟು ನ್ಯಾಯ ಪರಿಪಾಲನೆ ಮಾಡಿ ಎಂದು ಸುಮಲತಾ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.
sumalatha response to district election officer notice